ಶಿರಾ: ಆರೋಗ್ಯಕರ ಕುಟುಂಬಕ್ಕೆ ಪೌಷ್ಟಿಕ ಆಹಾರವೇ ಮೊದಲ ಹೆಜ್ಜೆ. ಮಾರುಕಟ್ಟೆಯನ್ನೇ ಅವಲಂಬಿಸದೆ ಮನೆಯ ಸುತ್ತಲಿನ ಸಣ್ಣ ಜಾಗದಲ್ಲಿಯೇ ವಿವಿಧ ತರಕಾರಿ, ಸೊಪ್ಪು ಹಾಗೂ ಹಣ್ಣಿನ ಗಿಡಗಳನ್ನು ಬೆಳೆಸಿ, ತಾಜಾ ಆಹಾರ ಸೇವಿಸುವ ಅಭ್ಯಾಸವನ್ನು ಪ್ರತಿಯೊಂದು ಕುಟುಂಬವೂ ಬೆಳೆಸಿಕೊಳ್ಳಬೇಕು ಎಂದು ಗೃಹ ವಿಜ್ಞಾನ ತಜ್ಞೆ ರಾಧಾ ಆರ್. ಬಣಕಾರ ಕರೆ ನೀಡಿದರು.
ತಾಲ್ಲೂಕಿನ ಸೀಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಜನಾಳು ಗ್ರಾಮದಲ್ಲಿ ಬಜ಼್ ಇಂಡಿಯಾ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿ ಸಹಯೋಗದಲ್ಲಿ ಹಾಗೂ ಟ್ರೀಸ್ ಫಾರ್ ಆಲ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ‘ಬಜ಼್ ಪೌಷ್ಟಿಕ ಕೈತೋಟ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಳೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಕೃಷಿ ಉತ್ಪಾದನೆ ಮೇಲೆ ಪರಿಣಾಮ ಬೀರಿದರೂ, ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ನೀಡುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಸಾಧ್ಯವಾದಷ್ಟು ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ. ‘ನಮ್ಮ ಮನೆಯ ಆಹಾರವನ್ನು ನಾವೇ ಬೆಳೆಸೋಣ, ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳೋಣ’ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸುಮಾರು 10ರಿಂದ 12 ಬಗೆಯ ಸೊಪ್ಪು ಹಾಗೂ ತರಕಾರಿ ಬೀಜಗಳನ್ನು ಒಳಗೊಂಡ ಕಿಟ್, ಸಾವಯವ ಗೊಬ್ಬರ ಮತ್ತು ವಿವಿಧ ಹಣ್ಣಿನ ಗಿಡಗಳನ್ನು ರೈತ ಮಹಿಳೆಯರಿಗೆ ವಿತರಿಸಲಾಗುತ್ತಿದೆ. ಒಬ್ಬ ವ್ಯಕ್ತಿ ದಿನಕ್ಕೆ ಸುಮಾರು 300ರಿಂದ 400 ಗ್ರಾಂ ತರಕಾರಿ ಸೇವಿಸುವುದು ಅಗತ್ಯವಾಗಿದ್ದು, ಮನೆಯ ಕೈತೋಟ ಇದಕ್ಕೆ ಪೂರಕವಾಗಲಿದೆ. ಕೈತೋಟ ಕೇವಲ ಆಹಾರ ಉತ್ಪಾದನೆಯ ಸ್ಥಳವಾಗದೆ, ಕುಟುಂಬದ ಆರೋಗ್ಯದ ಸಣ್ಣ ‘ಪೌಷ್ಟಿಕ ಕೇಂದ್ರ’ವಾಗಬೇಕು ಎಂದು ಹೇಳಿದರು.
ಕುಟುಂಬದ ಆಹಾರ ಪದ್ಧತಿ ಹಾಗೂ ಆರೋಗ್ಯದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ರೈತ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದ್ದು, ಇದರ ಭಾಗವಾಗಿ 40 ಮಹಿಳೆಯರಿಗೆ ತರಕಾರಿ ಬೀಜಗಳು, ಸಾವಯವ ಗೊಬ್ಬರ ಹಾಗೂ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ವೈವಿಧ್ಯಮಯ ಬೆಳೆಗಳಿಂದ ಸಮತೋಲನ ಆಹಾರ
ತೋಟಗಾರಿಕಾ ತಜ್ಞ ಪ್ರಶಾಂತ್ ಜೆ.ಎಂ. ಮಾತನಾಡಿ, ತರಕಾರಿ ಬೆಳೆಗಳಲ್ಲಿ ತೇವಾಂಶ ಹೆಚ್ಚಿರುವುದರಿಂದ ವಿವಿಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಬೆಳೆಗಳ ನಿರ್ವಹಣೆ ಹಾಗೂ ಸೂಕ್ತ ಸಾವಯವ ಪದ್ಧತಿಗಳ ಬಗ್ಗೆ ತಿಳಿದುಕೊಂಡು ಕೃಷಿ ಮಾಡಬೇಕು. ಮನೆಯ ಬಳಕೆಗೆ ಬೇಕಾದ ತರಕಾರಿಗಳನ್ನು ಸಾಧ್ಯವಾದಷ್ಟು ಸಾವಯವ ವಿಧಾನದಲ್ಲಿ ಬೆಳೆಸುವ ಮೂಲಕ ಸುರಕ್ಷಿತ ಹಾಗೂ ತಾಜಾ ಆಹಾರ ಪಡೆಯಬಹುದು ಎಂದರು.
ಟೊಮೆಟೊ, ಬದನೆಕಾಯಿಯಂತಹ ಹಣ್ಣಿನ ತರಕಾರಿಗಳು, ಕೊತ್ತಂಬರಿ, ಪಾಲಕ್, ಮೆಂತ್ಯೆಯಂತಹ ಸೊಪ್ಪುಗಳು, ಹೀರೆಕಾಯಿ, ಸೋರೆಕಾಯಿ, ಪಡವಲಕಾಯಿಯಂತಹ ಬಳ್ಳಿ ತರಕಾರಿಗಳು, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಹಲವು ಬೆಳೆಗಳನ್ನು ಕೈತೋಟದಲ್ಲಿ ಬೆಳೆಯಬಹುದು. ನುಗ್ಗೆ, ಕರಿಬೇವು, ತೊಂಡೆಕಾಯಿಯಂತಹ ಬಹುವಾರ್ಷಿಕ ಸಸ್ಯಗಳನ್ನು ಮನೆಯ ಬದುಗಳಲ್ಲಿ ಬೆಳೆಸುವುದರಿಂದ ದೀರ್ಘಕಾಲದವರೆಗೆ ಕುಟುಂಬದ ಆಹಾರದ ಅಗತ್ಯವನ್ನು ಪೂರೈಸಿಕೊಳ್ಳಬಹುದು ಎಂದು ವಿವರಿಸಿದರು.

ಮನೆಯಂಗಳದಲ್ಲೇ ಕೈತೋಟಕ್ಕೆ ಚಾಲನೆ
ಕಾರ್ಯಕ್ರಮದ ಅಂಗವಾಗಿ ಹುಂಜನಾಳು ಗ್ರಾಮದ ಹಸಿರು ಪ್ರೇರಕಿ ಶಿವಗಂಗಮ್ಮ ಅವರ ಮನೆಯ ಸಮೀಪ ಪ್ರಾಯೋಗಿಕವಾಗಿ ಕೈತೋಟ ನಿರ್ಮಿಸಲಾಯಿತು. ಬೀಜ ಬಿತ್ತುವುದರಿಂದ ಆರಂಭವಾಗುವ ಈ ಸಣ್ಣ ಪ್ರಯತ್ನ, ಕುಟುಂಬದ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕಡೆಗೆ ದೊಡ್ಡ ಹೆಜ್ಜೆಯಾಗಲಿ ಎಂಬ ಆಶಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಬಜ಼್ ಇಂಡಿಯಾ ಸಂಸ್ಥೆಯ ಗ್ರೀನ್ ಅಸೋಸಿಯೇಟ್ ಮಂಜುಳ ಜಿ.ಪಿ., ಸೀಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳ ಹಸಿರು ಪ್ರೇರಕರು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.