ತುಮಕೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ಶರೀಫ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆ, ಹೆಸರುಗಳ ಸೇರ್ಪಡೆ, ಅಳಿಸುವಿಕೆ ಹಾಗೂ ಮರುಸ್ಥಾಪನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಕೈಬಿಡದಂತೆ ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ಖಚಿತವಾಗುವಂತೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಎಸ್ ಐ ಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಇತರೆ ದುರ್ಬಲ ವರ್ಗಗಳ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಅರ್ಹ ಮತದಾರರ ಹೆಸರುಗಳನ್ನು ತಕ್ಷಣ ಮರುಸ್ಥಾಪಿಸಬೇಕು ಎಂದು ತಾಜುದ್ದೀನ್ ಶರೀಫ್ ಆಗ್ರಹಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ ಕುರಿತು ಜನರಲ್ಲಿ ವಿಶ್ವಾಸ ಉಳಿಯುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.