ಶಿರಾ : ಯುವಜನ ಸಂಘಗಳು ನಶಿಸುತ್ತಿರುವ ಪರಿಸರದ ಸಂರಕ್ಷಣೆಗಾಗಿ ಹೆಚ್ಚು ಒತ್ತು ನೀಡಬೇಕು. ಸಂಘಗಳಾಗಿ ತಾವು ಮಾಡುವ ಹಲವು ಚಟುವಟಿಕೆಗಳಲ್ಲಿ ಪರಿಸರಾತ್ಮಕ ಕಾರ್ಯಗಳನ್ನು ಹೆಚ್ಚು ಹೆಚ್ಚು ಮಾಡುವ ಅಗತ್ಯವಿದೆ. ಭೂಮಿಯ ಸಕಲ ಜೀವಿಗಳಿಗೂ ಪ್ರಮುಖವಾಗಿ ಅಗತ್ಯವಿರುವ ಒಂದು ಅಂಶ ಅಂದರೆ ಅದು ಗಾಳಿ. ಇದು ಇಲ್ಲದೆ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ. ಅನಂತರ ಬೇಕಿರುವ ಮತ್ತೊಂದು ಪ್ರಮುಖ ಅಂಶ ಎಂದರೆ ಅದು ನೀರು. ಈ ಎರಡೂ ಭೂಮಿ ಮೇಲೆ ಅತ್ಯಂತ ಅಗತ್ಯವಾದ ಅಂಶಗಳಾಗಿವೆ. ಆದರೆ ಇವತ್ತಿನ ಕಾಲಮಾನದಲ್ಲಿ ಈ ಎರಡೂ ಮುಖ್ಯ ಜೀವ ಸತ್ವಗಳಿಗೆ ಸಂಕಷ್ಟ ಎದುರಾಗಿದೆ. ಇದರಿಂದ ಹೊರಬರಬೇಕಾದರೆ ಇರುವ ಒಂದೇ ಒಂದು ಮಾರ್ಗ ಎಂದರೆ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವುದಾಗಿದೆ ಎಂದು ಪರಿಸರ ಪ್ರೇಮಿ, ಯುವ ಸಂಚಲನ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕರಾದ ಚಿದಾನಂದ್ ರವರು ತಿಳಿಸಿದರು.
ನವ್ಯದಿಶಾ ಸಂಸ್ಥೆ ವತಿಯಿಂದ ಸಿರಾ ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದಲ್ಲಿ ಆಯೋಜಿಸಿದ್ದ “ಯುವಜನರು ಮತ್ತು ಸಮುದಾಯ” ಎಂಬ ಯುವಜನ ಸಂಘಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಜಾಗತೀಕ ತಾಪಮಾನ, ಅತೀವೃಷ್ಟಿ, ಅನಾವೃಷ್ಟಿ, ಮಾಲಿನ್ಯ ಈ ಎಲ್ಲವನ್ನೂ ತಡೆಗಟ್ಟಲು ಇರುವ ಏಕೈಕ ಮಾರ್ಗ ಅಂದರೆ ಅದು ಮರಗಳನ್ನು ಬೆಳೆಸುವುದು. ಅಭಿವೃದ್ಧಿಯ ಕಾರಣಕ್ಕೆ ಬೆಳೆದು ನಿಂತಿರುವ ಮರಗಳನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯ ಅನುಮತಿಯ ಅಗತ್ಯವಿದೆ. ಹಾಗಾಗಿ ನಾವು ಸಂಘಗಳಾಗಿ ಯಾವುದೇ ಕೆಲಸ ಮಾಡುವ ಮೊದಲು ಅದರ ಕುರಿತು ಸಂಪೂರ್ಣ ಮಾಹಿತಿ ತಿಳಿದು ಅನಂತರ ಕಾರ್ಯರೂಪಕ್ಕೆ ತರುವುದು ಮುಖ್ಯವಾಗಿದೆ ಎಂದರು.
ಬೆಂಗಳೂರಿನಲ್ಲಿ ಒಬ್ಬ ವ್ಯಕ್ತಿ ಶುದ್ಧ ಗಾಳಿ ಸೇವಿಸಬೇಕಾದರೆ 7 ಮರಗಳ ಅಗತ್ಯವಿದೆ. ಆದರೆ ಬೆಂಗಳೂರಿನಲ್ಲಿ ನಡೆಸಿರುವ ಮರಗಳ ಸಮೀಕ್ಷೆಯ ಅನುಸಾರ 1 ಮರಕ್ಕೆ 7 ಜನ ಅವಲಂಭಿಸಿರುವುದು ಆಘಾತಕಾರಿ ವಿಷಯವಾಗಿದೆ. ಮರಗಳನ್ನ ಕಾಡಿನಲ್ಲಿ ಮಾತ್ರ ಬೆಳೆಸಬೇಕು ಎಂದೆನಿಲ್ಲ. ನಿಮ್ಮ ಮನೆಗಳ ಮುಂದೆ, ಹೊಲದಲ್ಲಿ ಆದಷ್ಟು ಎತ್ತರದ ಮರಗಳನ್ನ ಹೆಚ್ಚು ಗಾಳಿ ಕೊಡುವ ಮರಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ. ಈಗ ನಡೆಯುತ್ತಿರುವ ಹಲವು ಪ್ರಕೃತಿ ವಿಕೋಪಗಳಿಗೆ ಕಾರಣ ಮರಗಳನ್ನು ಕಡಿಯುತ್ತಿರುವುದಾಗಿದೆ ಎಂದು ತಿಳಿಸಿದರು.
ಯುವಜನರು ತಮ್ಮ ಸಂಘಗಳ ಚಟುವಟಿಕೆಗಳಲ್ಲಿ ಹಸಿರೀಕರಣದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ನಮ್ಮ ಸುತ್ತಲಿನ ಕಾಡು, ಕೆರೆ, ಹಳ್ಳ, ನದಿಗಳ ಸಂರಕ್ಷಣೆಯಲ್ಲಿ ಯುವಜನ ಸಂಘಗಳ ಪಾತ್ರ ಮಹತ್ವದಾಗಿದೆ. ಅವುಗಳಿಗೆ ಏನೇ ಸಮಸ್ಯೆ ಬಂದರೂ ಪರಿಹಾರ ಮಾಡಬಹುದಾದ ಮಾರ್ಗಗಳನ್ನು ಹುಡುಕಿ, ಮಾಹಿತಿ ಕಲೆಹಾಕಿ ಅನಂತರ ಬಗೆಹರಿಸುವ ಕಡೆಗೆ ಗಮನ ಹರಿಸಬೇಕಿದೆ. ಯಾವುದೇ ಸಮಸ್ಯೆ ಇರಲಿ ಅದನ್ನು ಬಗೆಹರಿಸಲು ಕಾನೂನಾತ್ಮಕವಾಗಿ ಹೇಗೆ ಹೋರಾಡಬಹುದು ಎಂಬ ಮಾಹಿತಿ ಅರಿಯುವುದು ಬಹಳ ಮುಖ್ಯವಾಗುತ್ತದೆ. ಆಗ ಮಾತ್ರ ನಮ್ಮ ಮಾತುಗಳಿಗೆ ಮತ್ತು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ದೊರೆಯುತ್ತದೆ ಎಂದು ಪ್ರೇರಣೆ ನೀಡಿದರು.
ಕಾರ್ಯಾಗಾರದಲ್ಲಿ ಸಿರಾ ತಾಲ್ಲೂಕಿನ 14 ಗ್ರಾಮಗಳ ವಿವಿಧ ಯುವಜನ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ, ಸಂಘಗಳ ಕಾರ್ಯಚಟುವಟಿಕೆಗಳು ಮತ್ತು ಅವರು ತಂದ ಬದಲಾವಣೆಗಳ ಕುರಿತು ಗುಂಪುಗಳಾಗಿ ಚರ್ಚಿಸಿ ಹಂಚಿಕೊಂಡರು.
ಕಾರ್ಯಾಗಾರದಲ್ಲಿ ನವ್ಯ ದಿಶಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಮೇಘ ರಾಮದಾಸ್, ಶ್ರೀಮತಿ ಅಶ್ವಿನಿ, ಶ್ರೀ ಜನಾರ್ಧನ್ ಮತ್ತು ಶ್ರೀ ಮಂಜುನಾಥ್ ಉಪಸ್ಥಿತರಿದ್ದರು.