ಅಹಮದಾಬಾದ್: ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ (Josh Hazlewood) ಫೈನಲ್ ಪಂದ್ಯಗಳಲ್ಲಿ ಅದೃಷ್ಟದ ಸಂಕೇತವಾಗಿ ಹೊರಹೊಮ್ಮಿದ್ದಾರೆ. ಅವರು ಕಣಕ್ಕಿಳಿದ ಪ್ರತಿಯೊಂದು ಮಹತ್ವದ ಫೈನಲ್ ಪಂದ್ಯದಲ್ಲೂ ತಂಡ ಗೆಲುವು ಸಾಧಿಸಿರುವುದು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ತಮ್ಮ ಶಿಸ್ತಿನ ಬೌಲಿಂಗ್ ಹಾಗೂ ಒತ್ತಡದ ಕ್ಷಣಗಳಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಹೇಜಲ್‌ವುಡ್ ಇದುವರೆಗೆ ಆಡಿದ 10 ಪ್ರಮುಖ ಫೈನಲ್‌ಗಳಲ್ಲೂ ಚಾಂಪಿಯನ್ ಆಗಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
2010ರಲ್ಲಿ ಅಂಡರ್-19 ವಿಶ್ವಕಪ್ ಗೆಲುವಿನಿಂದ ಆರಂಭವಾದ ಹೇಜಲ್‌ವುಡ್‌ರ ಟ್ರೋಫಿ ಪಯಣ, 2012ರ ಚಾಂಪಿಯನ್ಸ್ ಲೀಗ್ ಟಿ20, 2015ರ ಏಕದಿನ ವಿಶ್ವಕಪ್, 2020ರ ಬಿಗ್‌ಬ್ಯಾಶ್ ಲೀಗ್, 2021ರ ಐಪಿಎಲ್ ಹಾಗೂ ಟಿ20 ವಿಶ್ವಕಪ್, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಮೂಲಕ ಮುಂದುವರಿದಿದೆ. ಬಳಿಕ 2025 ಹಾಗೂ 2026ರ ಐಪಿಎಲ್ ಟ್ರೋಫಿಗಳನ್ನೂ ಗೆದ್ದು ಫೈನಲ್‌ಗಳಲ್ಲಿ ಅಜೇಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ಸಾಲಿನ ಜೊತೆಗೆ ಈ ಬಾರಿಯ (2026) ಐಪಿಎಲ್ ಫೈನಲ್‌ನಲ್ಲೂ ಆರ್‌ಸಿಬಿ (RCB) ತಂಡ ಚಾಂಪಿಯನ್ ಆಗುವಲ್ಲಿ ಹೇಜಲ್‌ವುಡ್ ನಿರ್ಣಾಯಕ ಪಾತ್ರವಹಿಸಿದರು. ಈ ಸೀಸನ್‌ನಲ್ಲಿ 13 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿರುವ ಅವರು, ದೆಹಲಿ ವಿರುದ್ಧದ ಲೀಗ್ ಪಂದ್ಯದಲ್ಲಿ ಕೇವಲ 12 ರನ್‌ಗೆ 4 ವಿಕೆಟ್ ಪಡೆದು ಮಿಂಚಿದ್ದರು. ಅವರ ಘಾತಕ ಬೌಲಿಂಗ್‌ಗೆ ಡೆಲ್ಲಿ ಕ್ಯಾಪಿಟಲ್ಸ್ 75 ರನ್‌ಗೆ ಕುಸಿದರೆ, ಆರ್‌ಸಿಬಿ 6.3 ಓವರ್‌ಗಳಲ್ಲೇ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತ್ತು. ಆ ಗೆಲುವು ತಂಡದ ನೆಟ್ ರನ್‌ರೇಟ್ ಹೆಚ್ಚಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿತ್ತು.