ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್ ಸ್ಟಾರ್ ಎಂದೇ ಗುರುತಿಸಲ್ಪಡುತ್ತಿರುವ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಭರ್ಜರಿ ಆಫರ್ ಬಂದಿದೆ. ವರದಿಗಳ ಪ್ರಕಾರ, ಬ್ಯಾಟ್ ಮೇಲೆ ಬ್ರ್ಯಾಂಡ್ ಲೋಗೋ ಪ್ರದರ್ಶಿಸಲು ಪ್ರಮುಖ ಕಾರ್ಪೊರೇಟ್ ಟೈರ್ ಕಂಪೆನಿಯೊಂದು ವಾರ್ಷಿಕ 12 ಕೋಟಿ ರೂ. ಸ್ಪಾನ್ಸರ್‌ಶಿಪ್ ನೀಡಲು ಮುಂದಾಗಿದೆ.
ಇದಷ್ಟೇ ಅಲ್ಲ, ಮತ್ತೊಂದು ಟೈರ್ ಕಂಪೆನಿಯೂ ವೈಭವ್ ಸೂರ್ಯವಂಶಿಯ ಬ್ಯಾಟ್ ಸ್ಪಾನ್ಸರ್‌ಶಿಪ್ ಪಡೆಯಲು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದೆ. ಹೀಗಾಗಿ ಈ ಯುವ ಕ್ರಿಕೆಟರ್‌ಗೆ ಭಾರೀ ಬೇಡಿಕೆ ಮೂಡಿದ್ದು, ಕೋಟಿ ರೂಪಾಯಿ ಡೀಲ್ ಖಚಿತವಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ವೈಭವ್ ಸೂರ್ಯವಂಶಿ ‘SS’ (ಸರೀನ್ ಸ್ಪೋರ್ಟ್ಸ್) ಕಂಪೆನಿಯೊಂದಿಗೆ ವಾರ್ಷಿಕ 50 ಲಕ್ಷ ರೂ. ಮೌಲ್ಯದ ಬ್ಯಾಟ್ ಒಪ್ಪಂದವನ್ನು ಹೊಂದಿದ್ದಾರೆ. ಈ ಮೂರು ವರ್ಷದ ಹಳೆಯ ಒಪ್ಪಂದ ಈಗ ಅಂತಿಮ ಹಂತದಲ್ಲಿದ್ದು, ಅದು ಮುಗಿಯುತ್ತಿದ್ದಂತೆ ಹೊಸ ಬ್ರ್ಯಾಂಡ್ ಲೋಗೋ ಬ್ಯಾಟ್ ಮೇಲೆ ಕಾಣಿಸಿಕೊಳ್ಳಲಿದೆ.
ಆದರೆ ಆ ಹೊಸ ಸ್ಪಾನ್ಸರ್ ಯಾರು ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೆ ಭಾರತ ತಂಡದ ಸ್ಟಾರ್ ಆಟಗಾರರ ಬ್ಯಾಟ್ ಸ್ಪಾನ್ಸರ್‌ಗಳನ್ನು ಹೊಂದಿರುವ ಪ್ರಮುಖ ಟೈರ್ ಕಂಪೆನಿಗಳೇ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ ಎಂದು ಮೂಲಗಳು ಸೂಚಿಸುತ್ತಿವೆ.
ಭಾರತದ ಸ್ಟಾರ್ ಕ್ರಿಕೆಟರ್‌ಗಳ ಬ್ಯಾಟ್ ಸ್ಪಾನ್ಸರ್‌ಶಿಪ್‌ಗಳ ಪೈಕಿ ವಿರಾಟ್ ಕೊಹ್ಲಿ (MRF) ವಾರ್ಷಿಕ 12.5 ಕೋಟಿ ರೂ. ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಶುಭ್‌ಮನ್ ಗಿಲ್ (MRF) ವಾರ್ಷಿಕ 10 ಕೋಟಿ ರೂ. ಹಾಗೂ ರೋಹಿತ್ ಶರ್ಮಾ (CEAT) ವಾರ್ಷಿಕ 4 ಕೋಟಿ ರೂ. ಪಡೆಯುತ್ತಿದ್ದಾರೆ.
ಈಗ ಇದೇ ದೈತ್ಯ ಕಂಪೆನಿಗಳ ಪೈಪೋಟಿಯ ನಡುವೆ ವೈಭವ್ ಸೂರ್ಯವಂಶಿಯ ಹೆಸರು ಕೂಡ ಸೇರಿಕೊಂಡಿದ್ದು, 12 ಕೋಟಿ ರೂ. ಡೀಲ್ ಮೂಲಕ ದೊಡ್ಡ ದಾಖಲೆ ಬರೆಯುವ ಸಾಧ್ಯತೆ ಕಾಣಿಸುತ್ತಿದೆ. ಕೆಲವೇ ತಿಂಗಳಲ್ಲಿ SS ಒಪ್ಪಂದ ಮುಗಿಯಲಿದ್ದು, ಅದಕ್ಕೂ ಮೊದಲು ಹೊಸ ಸ್ಪಾನ್ಸರ್‌ಶಿಪ್ ಘೋಷಣೆಯಾಗುವ ನಿರೀಕ್ಷೆಯಿದೆ.
ಹೀಗಾಗಿ ವೈಭವ್ ಸೂರ್ಯವಂಶಿ 12 ಕೋಟಿ ರೂ. ಆಫರ್ ಒಪ್ಪಿಕೊಳ್ಳುತ್ತಾರಾ ಅಥವಾ ಇನ್ನೂ ಹೆಚ್ಚಿನ ಮೊತ್ತದ ಡೀಲ್ ಪಡೆದು ವಿರಾಟ್ ಕೊಹ್ಲಿಯ ದಾಖಲೆಗೂ ಸವಾಲು ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.