ಇಸ್ಲಾಮಾಬಾದ್: Rajasthan Royals ತಂಡದ ಆರಂಭಿಕ ಆಟಗಾರ Vaibhav Sooryavanshi ಸದ್ಯ ಕ್ರಿಕೆಟ್ ಜಗತ್ತಿನ ಹೊಸ ಸೆನ್ಸೇಷನ್ ಆಗಿದ್ದಾರೆ. ಯುವ ಬ್ಯಾಟರ್‌ನ ಸ್ಫೋಟಕ ಪ್ರದರ್ಶನಕ್ಕೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಇದೇ ವೇಳೆ Peshawar Zalmi ತಂಡದ ಮಾಲೀಕ Javed Afridi ಕೂಡ ವೈಭವ್ ಆಟವನ್ನು ಕೊಂಡಾಡಿದ್ದಾರೆ.
ಜಾವೇದ್ ಅಫ್ರಿದಿ ಹೇಳಿದ್ದೇನು?
15 ವರ್ಷದ Vaibhav Sooryavanshi ಅವರ 97 ರನ್‌ಗಳ ಸಿಡಿಲಬ್ಬರದ ಇನ್ನಿಂಗ್ಸ್ ನೋಡಿ ನಾನು ಅಚ್ಚರಿಗೊಂಡೆ. ಅವರ ಬ್ಯಾಟಿಂಗ್ ಶೈಲಿ, ಆತ್ಮವಿಶ್ವಾಸ ಮತ್ತು ಆಕ್ರಮಣಕಾರಿ ಆಟ ಎಲ್ಲರನ್ನೂ ಸೆಳೆಯುವಂತಿತ್ತು. ಇಷ್ಟು ಕಿರಿಯ ವಯಸ್ಸಿನಲ್ಲಿ ಇಂತಹ ಪ್ರತಿಭೆ ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪ. ಭವಿಷ್ಯದಲ್ಲಿ ನೀನು ವಿಶ್ವ ಕ್ರಿಕೆಟ್‌ನ ಸೂಪರ್‌ಸ್ಟಾರ್ ಆಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ ಎಂದು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಯುವ ಪ್ರತಿಭೆಗಳಿಗೆ Indian Premier League ಅತ್ಯುತ್ತಮ ವೇದಿಕೆಯಾಗಿದ್ದು, ಇದೇ ಮಾದರಿಯಲ್ಲಿ ಪಾಕಿಸ್ತಾನದಲ್ಲೂ ಯುವ ಆಟಗಾರರನ್ನು ಬೆಳೆಸಲು Pakistan Super League ಪ್ರಮುಖ ಪಾತ್ರ ವಹಿಸುತ್ತಿದೆ. ಪಾಕಿಸ್ತಾನದ ಉದಯೋನ್ಮುಖ ಕ್ರಿಕೆಟಿಗರಿಗೆ ವೈಭವ್ ಸೂರ್ಯವಂಶಿಯಂತೆಯೇ ತಮ್ಮ ಪ್ರತಿಭೆ ಪ್ರದರ್ಶಿಸಲು ಇನ್ನಷ್ಟು ಅವಕಾಶಗಳು ಸಿಗಬೇಕು ಎಂದು ಜಾವೇದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ದಾಖಲೆಗಳೆಲ್ಲ ಧೂಳಿಪಟ:
Vaibhav Sooryavanshi ಐಪಿಎಲ್ ಪ್ರವೇಶಿಸಿದ ಕಡಿಮೆ ಅವಧಿಯಲ್ಲೇ ಹಲವು ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. 19ನೇ ಆವೃತ್ತಿಯಲ್ಲಿ 15 ಪಂದ್ಯಗಳಿಂದ 242.85ರ ಸ್ಟ್ರೈಕ್‌ರೇಟ್‌ನಲ್ಲಿ 680 ರನ್ ಕಲೆಹಾಕಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ.
ಇತ್ತೀಚೆಗೆ Sunrisers Hyderabad ವಿರುದ್ಧದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು. ಕೇವಲ 3 ರನ್‌ಗಳಿಂದ ಶತಕ ತಪ್ಪಿಸಿಕೊಂಡರೂ ಅವರ ಸ್ಫೋಟಕ ಆಟ ಅಭಿಮಾನಿಗಳನ್ನು ರಂಜಿಸಿತು.
ಭಾರತೀಯ ಕ್ರಿಕೆಟ್ ದಂತಕಥೆ Sachin Tendulkar ಹಾಗೂ ವೆಸ್ಟ್ ಇಂಡೀಸ್ ದಿಗ್ಗಜ Chris Gayle ಕೂಡ ಯುವ ಆಟಗಾರನ ಆಟಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಳೆದ ಎರಡು ಆವೃತ್ತಿಗಳಲ್ಲಿ Rajasthan Royals ತಂಡದ ಯಶಸ್ಸಿನಲ್ಲಿ ವೈಭವ್ ಸೂರ್ಯವಂಶಿ ಪ್ರಮುಖ ಪಾತ್ರ ವಹಿಸಿದ್ದಾರೆ.