ವಾಷಿಂಗ್ಟನ್: ಇರಾನ್ ಜೊತೆ ಎರಡನೇ ಹಂತದ ನೇರ ಮಾತುಕತೆ ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಮೊದಲಿಗೆ ಈ ಮಾತುಕತೆ ಯುರೋಪ್‌ನಲ್ಲಿ ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಮುಂದಿನ ಹಂತದ ಮಾತುಕತೆಯಲ್ಲಿ ಅಮೆರಿಕವನ್ನು ಯಾರು ಪ್ರತಿನಿಧಿಸಲಿದ್ದಾರೆ ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿಲ್ಲ. ತಾವು ಸ್ವತಃ ಭಾಗವಹಿಸುವುದಿಲ್ಲ ಎನ್ನುವುದನ್ನು ಮಾತ್ರ ಸೂಚಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಗೂ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ನೇತೃತ್ವದಲ್ಲಿ ಅಮೆರಿಕ ತಂಡ ಭಾಗವಹಿಸಿತ್ತು. ಆದರೆ ಆ ಮಾತುಕತೆ ಫಲಕಾರಿಯಾಗಲಿಲ್ಲ.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಬಾರದು ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು ಎಂಬುದು ಅಮೆರಿಕದ ಮುಖ್ಯ ಬೇಡಿಕೆಯಾಗಿದೆ. ಆದರೆ ಈ ಷರತ್ತುಗಳಿಗೆ ಇರಾನ್ ಒಪ್ಪದೇ ಇರುವುದರಿಂದ ಮೊದಲ ಹಂತದ ಸಂಧಾನ ಮಾತುಕತೆ ವಿಫಲಗೊಂಡಿತು.