ಹೈಲೈಟ್ಸ್:
ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ನೆತನ್ಯಾಹು ವಿರುದ್ಧ ಟ್ರಂಪ್ ಫೋನ್ ಸಂಭಾಷಣೆಯಲ್ಲೇ ಆಕ್ರೋಶ
ʼನಾನಿಲ್ಲದಿದ್ದರೆ ನೀನು ಜೈಲಲ್ಲಿರ್ತಿದ್ದೆʼ: ನೆತನ್ಯಾಹುವಿಗೆ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾಗಿ ವರದಿ
ಹೆಜ್ಬೊಲ್ಲಾ ದಾಳಿ ನಿಲ್ಲಿಸುವ ಬಗ್ಗೆ ಟ್ರಂಪ್-ನೆತನ್ಯಾಹು ಹೇಳಿಕೆಗಳಲ್ಲಿ ಸ್ಪಷ್ಟ ಭಿನ್ನತೆ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಆರಂಭದಲ್ಲಿ ಒಂದೇ ಧೋರಣೆಯಲ್ಲಿ ಕಾರ್ಯಾಚರಣೆ ನಡೆಸಿದ್ದ ಅಮೆರಿಕಾ ಹಾಗೂ ಇಸ್ರೇಲ್ ನಡುವೆ ಇದೀಗ ಭಿನ್ನಾಭಿಪ್ರಾಯಗಳು ತೀವ್ರವಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಇತ್ತೀಚಿನ ಫೋನ್ ಸಂಭಾಷಣೆ ವೇಳೆ ತೀವ್ರ ಮಾತಿನ ಚಕಮಕಿ ನಡೆದಿದ್ದು, "ನಾನು ಇರಲಿಲ್ಲ ಅಂದ್ರೆ ನೀನು ಜೈಲಿಗೆ ಹೋಗುತ್ತಿದ್ದೆ" ಎಂದು ಟ್ರಂಪ್ ಕಿಡಿಕಾರಿದ್ದಾರೆ ಎಂಬ ವರದಿ ಹೊರಬಿದ್ದಿದೆ.
ಇತ್ತೀಚೆಗೆ ನಡೆದ ದೂರವಾಣಿ ಮಾತುಕತೆಯಲ್ಲಿ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದಾಳಿಗಳ ಕುರಿತು ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೆತನ್ಯಾಹು ಅವರನ್ನು ʼಹುಚ್ಚʼ ಎಂದು ಕರೆಯುವ ಮೂಲಕ ಎಲ್ಲರೂ ನಿನ್ನಿಂದಾಗಿ ಇಸ್ರೇಲ್ ಅನ್ನು ದ್ವೇಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ. ಅಲ್ಲದೇ, ನಿಮ್ಮ ಕ್ರಮಗಳಿಂದ ಇರಾನ್ ಕುರಿತ ಶಾಂತಿ ಮಾತುಕತೆಗಳಿಗೂ ಧಕ್ಕೆ ಉಂಟಾಗುತ್ತಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಬೈರುತ್ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಟ್ರಂಪ್ ತೀವ್ರ ಆಕ್ರೋಶ ಹೊರಹಾಕಿದ್ದು, ಇಸ್ರೇಲ್‌ನ ಕ್ರಮಗಳು ದೇಶವನ್ನು ಜಾಗತಿಕ ಮಟ್ಟದಲ್ಲಿ ಪ್ರತ್ಯೇಕಗೊಳಿಸುತ್ತಿವೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳ ಸಂದರ್ಭದಲ್ಲಿ ನೆತನ್ಯಾಹುಗೆ ನೀಡಿದ್ದ ತಮ್ಮ ಬೆಂಬಲವನ್ನು ಉಲ್ಲೇಖಿಸಿದ ಟ್ರಂಪ್, "ನಾನು ನಿನ್ನನ್ನು ರಕ್ಷಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ಇದರಿಂದ ಇಸ್ರೇಲ್ ಮೇಲೂ ಜಗತ್ತಿನ ವಿರೋಧ ಹೆಚ್ಚುತ್ತಿದೆ" ಎಂದು ಹೇಳಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ.
ಲೆಬನಾನ್ ಮೇಲಿನ ದಾಳಿಗಳ ಬಗ್ಗೆ ಒಂದು ಹಂತದಲ್ಲಿ ಟ್ರಂಪ್ ಕೋಪೋದ್ರಿಕ್ತರಾಗಿ, "ನೀವು ಏನು ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ. ಲೆಬನಾನ್‌ನಲ್ಲಿ ಇಸ್ರೇಲ್‌ನ ಸೈನಿಕ ಕಾರ್ಯಾಚರಣೆಗಳು ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಜೊತೆಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳನ್ನು ಸಂಕೀರ್ಣಗೊಳಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಫೋನ್ ಸಂಭಾಷಣೆ ಬಳಿಕ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಇಂದು ಬೀಬಿ ನೆತನ್ಯಾಹು ಜೊತೆ ಮಾತನಾಡಿದ್ದೇನೆ. ಬೈರುತ್‌ನಲ್ಲಿ ನಡೆಯಲಿದ್ದ ದೊಡ್ಡ ದಾಳಿಯನ್ನು ಕೈಬಿಡುವಂತೆ ಕೇಳಿಕೊಂಡೆ. ಅವರು ತಮ್ಮ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡಿದ್ದಾರೆ. ಧನ್ಯವಾದಗಳು ಬೀಬಿ!" ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, "ಹೆಜ್ಬೊಲ್ಲಾ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಿದ್ದೇನೆ. ಇಸ್ರೇಲ್ ಹಾಗೂ ಅದರ ಸೈನಿಕರ ಮೇಲೆ ದಾಳಿ ನಿಲ್ಲಿಸಲು ಅವರು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಇಸ್ರೇಲ್ ಕೂಡ ದಾಳಿಗಳನ್ನು ನಿಲ್ಲಿಸಲು ಒಪ್ಪಿದೆ. ಇದು ಎಷ್ಟು ಕಾಲ ಮುಂದುವರಿಯುತ್ತದೆ ನೋಡಬೇಕು. ಬಹುಶಃ ಶಾಶ್ವತವಾಗಿರಬಹುದು ಎಂದು ಆಶಿಸುತ್ತೇನೆ" ಎಂದು ಟ್ರಂಪ್ ತಿಳಿಸಿದ್ದಾರೆ.
ಇದಾದ ಬಳಿಕ ನೆತನ್ಯಾಹು ಕೂಡ ಫೋನ್ ಸಂಭಾಷಣೆಯನ್ನು ದೃಢಪಡಿಸಿದ್ದು, ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಸೇನೆ ಎಂದಿನಂತೆ ನಿಯೋಜಿತವಾಗಿರುತ್ತದೆ ಎಂದು ಹೇಳಿದ್ದಾರೆ. ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತೇವೆ ಎಂದರೂ, ಹೆಜ್ಬೊಲ್ಲಾ ದಾಳಿ ಮುಂದುವರಿದರೆ ಟೆಲ್ ಅವಿವ್ ಮತ್ತೆ ಬೈರುತ್‌ನ ಗುರಿಗಳ ಮೇಲೆ ದಾಳಿ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.
ಹೀಗಾಗಿ, ಟ್ರಂಪ್ ಬಹಿರಂಗವಾಗಿ ನೆತನ್ಯಾಹು ವಿರುದ್ಧ ಅಸಮಾಧಾನ ವ್ಯಕ್ತಪಡಿಸದಿದ್ದರೂ, ಯುದ್ಧ ವಿರಾಮ ಘೋಷಣೆಯ ಬಳಿಕ ಉಭಯ ನಾಯಕರ ಹೇಳಿಕೆಗಳಲ್ಲಿ ಸ್ಪಷ್ಟ ಭಿನ್ನತೆ ಗೋಚರಿಸುತ್ತಿದೆ. ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಇಸ್ರೇಲ್ ನಡುವಿನ ಸಂಬಂಧ ಹೊಸ ಹಂತದ ಒತ್ತಡದತ್ತ ಸಾಗುತ್ತಿರುವಂತೆ ಕಾಣುತ್ತಿದೆ.