ಹೈಲೈಟ್ಸ್:
ಅಮೆರಿಕಾದಲ್ಲಿ ಅಕ್ರಮವಾಗಿ ವಾಣಿಜ್ಯ ಟ್ರಕ್ ಚಾಲನೆ ಮಾಡುತ್ತಿದ್ದ 30 ಭಾರತೀಯ ಡ್ರೈವರ್‌ಗಳ ಬಂಧನ, ಡಿಪೋರ್ಟ್‌ಗೆ US ಸಿದ್ಧತೆ
ಬೈಡನ್ ಆಡಳಿತದ ಅವಧಿಯಲ್ಲಿ ಪಡೆದ ಕೆಲಸದ ದಾಖಲೆಗಳು ಈಗ ಅಮಾನ್ಯ, ಭಾರತೀಯ ಚಾಲಕರಿಗೆ ಸಂಕಷ್ಟ
ವಿದೇಶಿ ಟ್ರಕ್ ಚಾಲಕರ ವಿರುದ್ಧ US ಬಾರ್ಡರ್ ಅಧಿಕಾರಿಗಳ ‘ಆಪರೇಷನ್ ಚೆಕ್‌ಮೇಟ್’, ಏನಿದು ಕಾರ್ಯಾಚರಣೆ?
ವಾಷಿಂಗ್ಟನ್: ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ವಲಸೆ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಿದ್ದು, ಅಕ್ರಮ ವಲಸಿಗರ ವಿರುದ್ಧ ಕ್ರಮಗಳನ್ನು ವೇಗಗೊಳಿಸಿದೆ. ಇದರ ಭಾಗವಾಗಿ ನಡೆದ ‘ಆಪರೇಷನ್ ಚೆಕ್‌ಮೇಟ್’ ಕಾರ್ಯಾಚರಣೆಯಲ್ಲಿ USನಲ್ಲಿ ಅಕ್ರಮವಾಗಿ ವಾಣಿಜ್ಯ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದ 30 ಭಾರತೀಯರನ್ನು ಬಂಧಿಸಲಾಗಿದ್ದು, ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.
USನಲ್ಲಿ 30 ಭಾರತೀಯ ಟ್ರಕ್ ಚಾಲಕರ ಬಂಧನ!
ಈ ಕುರಿತು ಸೋಮವಾರ (ಜೂನ್ 1) ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಇಲಾಖೆ ಮಾಹಿತಿ ನೀಡಿದೆ. ಮೇ 11ರಿಂದ 15ರವರೆಗೆ ಅರಿಜೋನಾದ ಯುಮಾ ಸೆಕ್ಟರ್‌ನಲ್ಲಿ ನಡೆದ ‘ಆಪರೇಷನ್ ಚೆಕ್‌ಮೇಟ್’ ವೇಳೆ ವಲಸೆ ನಿಯಮ ಉಲ್ಲಂಘನೆ ಆರೋಪದಲ್ಲಿ 52 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ 36 ಮಂದಿ ವಾಣಿಜ್ಯ ಸೆಮಿ-ಟ್ರಕ್ ಚಾಲಕರಾಗಿದ್ದು, 30 ಮಂದಿ ಭಾರತೀಯ ಮೂಲದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದವರು ಮೆಕ್ಸಿಕೊ, ಎಲ್ ಸಾಲ್ವಡಾರ್ ಮತ್ತು ರಷ್ಯಾ ಮೂಲದವರಾಗಿದ್ದಾರೆ.
ಮುಂದುವರಿದು, “ಬಂಧಿತರಲ್ಲಿ ಕೆಲವರು ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ವಾಷಿಂಗ್ಟನ್ ಮತ್ತು ವರ್ಜೀನಿಯಾ ರಾಜ್ಯಗಳಿಂದ ನೀಡಲಾದ ವಾಣಿಜ್ಯ ಚಾಲನಾ ಪರವಾನಗಿಗಳನ್ನು ಹೊಂದಿದ್ದರೆ, ಇನ್ನೂ ಕೆಲವರು ಯಾವುದೇ ಮಾನ್ಯ ಪರವಾನಗಿ ಇಲ್ಲದೇ ಟ್ರಕ್ ಚಾಲನೆ ಮಾಡುತ್ತಿದ್ದರು. ಜೊತೆಗೆ, ಹಲವರು ಬೈಡನ್ ಆಡಳಿತದ ಅವಧಿಯಲ್ಲಿ ಪಡೆದ ಉದ್ಯೋಗ ಅನುಮತಿ ದಾಖಲೆಗಳನ್ನು ಬಳಸುತ್ತಿದ್ದು, ಅವುಗಳಿಗೆ ಈಗ ಮಾನ್ಯತೆ ಇಲ್ಲ” ಎಂದು CBP ಹೇಳಿದೆ.
ಬಂಧಿತರ ಗಡೀಪಾರಿಗೆ ಸಿದ್ಧತೆ
“ಬಂಧಿತರ ವಿರುದ್ಧ ಫೆಡರಲ್ ಕಾನೂನುಗಳ ಪ್ರಕಾರ ಕ್ರಮ ಕೈಗೊಳ್ಳಲಾಗಿದ್ದು, ಅಕ್ರಮ ಉದ್ಯೋಗ ಮತ್ತು ಗಡಿ ಉಲ್ಲಂಘನೆ ತಡೆಯುವ ಭಾಗವಾಗಿ ಅವರನ್ನು ಗಡೀಪಾರು ಮಾಡಲಾಗುತ್ತದೆ” ಎಂದು CBP ಸ್ಪಷ್ಟಪಡಿಸಿದೆ.
ಏನಿದು ‘ಆಪರೇಷನ್ ಚೆಕ್‌ಮೇಟ್’?
ಅಮೆರಿಕಾದಲ್ಲಿ ಅಕ್ರಮವಾಗಿ ವಾಣಿಜ್ಯ ವಾಹನಗಳನ್ನು ಚಲಾಯಿಸುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಬಂಧಿಸುವ ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವುದೇ ‘ಆಪರೇಷನ್ ಚೆಕ್‌ಮೇಟ್’ ಉದ್ದೇಶವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ US ಬಾರ್ಡರ್ ಪೆಟ್ರೋಲ್‌ನ ಯುಮಾ ಸೆಕ್ಟರ್‌ನ ಆಕ್ಟಿಂಗ್ ಚೀಫ್ ಪೆಟ್ರೋಲ್ ಏಜೆಂಟ್ ಡಸ್ಟಿನ್ ಕೌಡ್ಲ್, “ಕಾನೂನುಬಾಹಿರವಾಗಿ ದೇಶದಲ್ಲಿರುವ ಮತ್ತು ಭದ್ರತೆಗೆ ಅಪಾಯ ಉಂಟುಮಾಡುವ ಚಾಲಕರಿಂದ ಅಮೆರಿಕದ ರಸ್ತೆಗಳನ್ನು ಹಾಗೂ ಜನರನ್ನು ರಕ್ಷಿಸುವುದು ಈ ಕಾರ್ಯಾಚರಣೆಯ ಪ್ರಮುಖ ಗುರಿಯಾಗಿದೆ. ಅನರ್ಹ ಚಾಲಕರಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಫೆಡರಲ್ ಏಜೆಂಟರು ಪ್ರತಿದಿನ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.