ತುರುವೇಕೆರೆ : ತಾಲ್ಲೂಕಿನಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಬರಪರಿಹಾರವಾಗಿ ಎಕರೆಗೆ ೩೦ ಸಾವಿರ ರೂ ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಮಸಾಲಾ ಜಯರಾಮ್ ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಭಿತ್ತನೆ ಮಾಡಿದ್ದ ರಾಗಿ ಬೆಳೆ ಇಂದು ಮಳೆಯಿಲ್ಲದೆ, ನೀರಿಲ್ಲದೆ ಸಂಪೂರ್ಣ ನಾಶವಾಗಿದೆ. ಕ್ಷೇತ್ರದಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದೆ. ದಂಡಿನಶಿವರ, ದಬ್ಬೇಘಟ್ಟ, ಮಾಯಸಂದ್ರ, ಸಿ.ಎಸ್.ಪುರ ಹೋಬಳಿಗೆ ಹೇಮಾವತಿ ನೀರು ಹರಿಸಿಲ್ಲ. ಇದರಿಂದ ರೈತರಿಗೆ ಕೃಷಿ ಚಟುವಟಿಕೆಗೆ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ಏರ್ಪಟ್ಟಿದೆ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ತುರುವೇಕೆರೆ ಕ್ಷೇತ್ರವೂ ತುಮಕೂರು ಜಿಲ್ಲೆಯಲ್ಲಿದೆ ಎಂಬುದನ್ನು ಮನಗಂಡು ಕ್ಷೇತ್ರದ ಕೆರೆಕಟ್ಟೆಗಳಿಗೆ ಹೇಮಾವತಿ ನೀರನ್ನು ಹರಿಸಬೇಕು, ಕ್ಷೇತ್ರಕ್ಕೆ ಅನ್ಯಾಯ ಮಾಡಬಾರದು ಎಂದರು.
ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆಯನ್ನು ಸರ್ಕಾರ ಮಾಡಿದೆ, ಆದರೆ ಯಾವುದೇ ಅನುದಾನ, ಪರಿಹಾರ ಒದಗಿಸಿಲ್ಲ. ಕೂಡಲೇ ಸರ್ಕಾರ ಬರಪರಿಹಾರ ಒದಗಿಸಬೇಕು. ಜಾನುವಾರುಗಳಿಗೆ ಗೋಶಾಲೆ ತೆರೆಯಬೇಕು, ಮೇವಿನ ಕೊರತೆಯಾಗದಂತೆ ಮೇವಿನ ಸಂಗ್ರಹ ಮಾಡಬೇಕು. ರೈತರಿಗೆ ೨೫೦೦ ರೂ ಪರಿಹಾರ ಘೋಷಿಸಿದ್ದು, ಅದು ರೈತರಿಗೆ ಬೆವರು ಒರೆಸಿಕೊಳ್ಳಲು ಟವೆಲ್ ತೆಗೆದುಕೊಳ್ಳಲು ಸಾಕಾಗುವುದಿಲ್ಲ. ಆದ್ದರಿಂದ ಕೂಡಲೇ ಎಕರೆಗೆ ಮೂವತ್ತು ಸಾವಿರ ರೂ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೇಮಾವತಿ ನೀರಿನ ಬಗ್ಗೆ ಚಕಾರವೆತ್ತುತ್ತಿಲ್ಲ. ಹೇಮಾವತಿ ನೀರು ಹರಿಸುವ ಬಗ್ಗೆ ಸೂಕ್ತ ಗಮನಹರಿಸಬೇಕು. ಬರಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಬರಬೇಕಾದ ಅನುದಾನವನ್ನು ಸರ್ಕಾರದಿಂದ ತಂದು ರೈತರಿಗೆ ನೆರವಾಗಬೇಕೆಂದರು.
ಸರ್ಕಾರ ತನ್ನ ಘೋಷಣೆಯಂತೆ ೩ ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಹೇಮಾವತಿ ನೀರನ್ನು ಹರಿಸುತ್ತಿಲ್ಲ. ಬರಪರಿಹಾರ ಒದಗಿಸುತ್ತಿಲ್ಲ. ರೈತರು ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಅವರು, ಸರ್ಕಾರ ಎಲ್ಲಾ ಭಾಗ್ಯ, ಗ್ಯಾರಂಟಿ ನೀಡಿದೆ. ರೈತರ ಸಂಕಷ್ಟಕ್ಕೆ ಮಾತ್ರ ಸ್ಪಂದಿಸುತ್ತಿಲ್ಲ. ಆದ್ದರಿಂದ ರೈತರಿಗೆ ಆತ್ಮಹತ್ಯೆ ಭಾಗ್ಯ ಕಲ್ಪಿಸಿ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಇಂತಿಷ್ಟು ಹಣ ನೀಡ್ತೇವೆಂದು ಘೋಷಿಸಿ ಪುಣ್ಯ ಕಟ್ಟುಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪಪಂ ಮಾಜಿ ಅಧ್ಯಕ್ಷ ಚಿದಾನಂದ್, ತಾಲೂಕು ಬಿಜೆಪಿ ಉಪಾಧ್ಯಕ್ಷರಾದ ಮಂಜೇಗೌಡ, ಸಿದ್ದಪ್ಪಾಜಿ, ಖಜಾಂಚಿ ಹರಿಕಾರನಹಳ್ಳಿ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಯೋಗಾನಂದ್, ಮಹೇಶ್, ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕಣತೂರು ನಾಗೇಶ್, ಯುವಮೋರ್ಚಾ ಅಧ್ಯಕ್ಷ ತೀರ್ಥಕುಮಾರ್, ಬಿಜೆಪಿ ನಗರ ಅಧ್ಯಕ್ಷ ರಾಘವೇಂದ್ರ, ಮುಖಂಡರಾದ ವಿ.ಬಿ.ಸುರೇಶ್, ಪ್ರದೀಪ್, ತಂಡಗ ಧನಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.