ಜಾಗತಿಕ ಕಚ್ಚಾ ತೈಲ ದರಗಳು ಮತ್ತೆ ಬ್ಯಾರಲ್‌ಗೆ 100 ಡಾಲರ್ ಗಡಿ ಮೀರಿ ಏರಿಕೆ ಕಂಡಿವೆ. ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ಸ್‌ನಲ್ಲಿ ದರವು 104 ಡಾಲರ್ ಮೀರಿದರೆ, ಬ್ರೆಂಟ್ ಕ್ರೂಡ್ ಬೆಲೆ 101 ಡಾಲರ್ ಮಟ್ಟ ತಲುಪಿದೆ. ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆ ವಿಫಲವಾಗಿದ್ದು, ಹಾರ್ಮುಜ್ ಜಲಸಂಧಿಯ ಮೇಲಿನ ಉದ್ವಿಗ್ನತೆ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.
ನವದೆಹಲಿ, ಏಪ್ರಿಲ್ 13: ಅಮೆರಿಕ–ಇರಾನ್ ನಡುವೆ ನಡೆದ ರಾಜಿ ಸಂಧಾನ ಕುಸಿದ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಲೆಮಾರಿ ಸ್ಥಿತಿ ನಿರ್ಮಾಣವಾಗಿದೆ. ಕಚ್ಚಾ ತೈಲ ದರಗಳು ಮತ್ತೊಮ್ಮೆ 100 ಡಾಲರ್ ಗಡಿಯನ್ನು ದಾಟಿ ಹೂಡಿಕೆದಾರರಲ್ಲಿ ಆತಂಕ ಮೂಡಿಸಿವೆ. ಸೋಮವಾರ ತೈಲದ ಬೆಲೆ ಶೇ. 10ಕ್ಕೂ ಹೆಚ್ಚು ಏರಿಕೆ ಕಂಡು ಬ್ಯಾರಲ್‌ಗೆ 105 ಡಾಲರ್ ಸಮೀಪ ತಲುಪಿದೆ. ಡಬ್ಲ್ಯುಟಿಐ ಫ್ಯೂಚರ್ಸ್‌ನಲ್ಲಿ ಬೆಲೆ 104.25 ಡಾಲರ್ ಆಗಿದ್ದರೆ, ಬ್ರೆಂಟ್ ಕ್ರೂಡ್ 101 ಡಾಲರ್ ಮಟ್ಟದಲ್ಲಿ ವಹಿವಾಟಾಗುತ್ತಿದೆ.
ತೈಲ ದರ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಶಾಂತಿ ಮಾತುಕತೆ ವಿಫಲವಾಗಿರುವುದರ ಜೊತೆಗೆ ಹಾರ್ಮುಜ್ ಜಲಸಂಧಿ ಕುರಿತ ಉದ್ವಿಗ್ನ ಪರಿಸ್ಥಿತಿಯೂ ಸೇರಿದೆ. ವರದಿಗಳ ಪ್ರಕಾರ, ಅಮೆರಿಕ ಮುಂದಿಟ್ಟಿರುವ ಪರಮಾಣು ನಿಯಂತ್ರಣ ಮತ್ತು ಸಾಗಣೆ ಭದ್ರತೆ ಕುರಿತ ಬೇಡಿಕೆಗಳನ್ನು ಇರಾನ್ ತಿರಸ್ಕರಿಸಿದ್ದು, ಇದರಿಂದ ಸಂಧಾನ ಕೊನೆಯ ಹಂತದಲ್ಲಿ ಮುರಿದುಬಿದ್ದಿದೆ.
ಇಸ್ರೇಲ್ ಹಾಗೂ ಅಮೆರಿಕದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಹಾರ್ಮುಜ್ ಜಲಸಂಧಿಯ ನಿಯಂತ್ರಣವನ್ನು ಕಠಿಣಗೊಳಿಸಿದೆ. ಜಾಗತಿಕವಾಗಿ ಸಾಗುವ ತೈಲದ ಶೇ. 20ರಷ್ಟು ಈ ಮಾರ್ಗದ ಮೂಲಕ ಸಾಗುವುದರಿಂದ, ಇದರಲ್ಲಿ ಉಂಟಾದ ಅಡಚಣೆ ವಿಶ್ವ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹಡಗುಗಳ ಮೇಲೆ ಸುಂಕ ವಿಧಿಸುವ ನಿರ್ಧಾರವೂ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಈ ಬೆಳವಣಿಗೆಗಳ ನಡುವೆ ಅಮೆರಿಕ ತನ್ನ ನೌಕಾಪಡೆಯನ್ನು ಜಲಸಂಧಿಯತ್ತ ಕಳುಹಿಸಲು ಮುಂದಾಗಿದ್ದು, ಉದ್ವಿಗ್ನತೆ ಹೆಚ್ಚುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ಪರಿಣಾಮವಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇಂಧನ ಬಿಕ್ಕಟ್ಟು ಮತ್ತೆ ತೀವ್ರವಾಗುವ ಸಾಧ್ಯತೆ ಇದೆ. ಭಾರತ ಈಗಾಗಲೇ ತೈಲ ಆಮದು ಮೂಲಗಳನ್ನು ವಿಸ್ತರಿಸುವುದು ಹಾಗೂ ರಫ್ತು ಸುಂಕ ಹೆಚ್ಚಿಸುವಂತಹ ಕ್ರಮಗಳನ್ನು ಕೈಗೊಂಡಿದೆ