ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಇರಾನ್‌ನ (Iran) ಸೇನಾ ತಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕ (America) ರಾತ್ರಿ ಪೂರ್ತಿ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸಿದ್ದು, ಇರಾನ್‌ನ ನಾಲ್ಕು ಡ್ರೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂದರ್ ಅಬ್ಬಾಸ್ (Bandar Abbas Airport) ಸಮೀಪ ಅಮೆರಿಕ ದಾಳಿ ನಡೆದ ಬಳಿಕ ಇರಾನ್ ಅಮೆರಿಕ ಸೇನಾ ನೆಲೆಗಳ ಮೇಲೆ ಪ್ರತೀಕಾರಾತ್ಮಕ ದಾಳಿ ಆರಂಭಿಸಿದೆ. ಅಮೆರಿಕದ ಕಾರ್ಯಾಚರಣೆಗೆ ಉತ್ತರವಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುರುವಾರ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಹೊರವಲಯದಲ್ಲಿ ಅಮೆರಿಕ ನಡೆಸಿದ ದಾಳಿಯ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಬೆದರಿಕೆ ಸೃಷ್ಟಿಸುತ್ತಿದ್ದ ಇರಾನ್‌ನ ನಾಲ್ಕು ಡ್ರೋನ್‌ಗಳನ್ನು ಅಮೆರಿಕ ಪಡೆಗಳು ಹೊಡೆದುರುಳಿಸಿವೆ. ಅಮೆರಿಕದ ರಕ್ಷಣಾ ಇಲಾಖೆ ಮೂಲಗಳ ಪ್ರಕಾರ, ಈ ಡ್ರೋನ್‌ಗಳು ಅಮೆರಿಕ ಹಾಗೂ ಮೈತ್ರಿ ರಾಷ್ಟ್ರಗಳ ಹಡಗುಗಳಿಗೆ ಅಪಾಯ ಉಂಟುಮಾಡುವ ಉದ್ದೇಶ ಹೊಂದಿದ್ದವು. ಇದನ್ನು ಗಮನಿಸಿದ ಸೆಂಟ್ರಲ್ ಕಮಾಂಡ್ ಪಡೆಗಳು ತಕ್ಷಣ ಕಾರ್ಯಾಚರಣೆ ನಡೆಸಿ ‘ಒನ್-ವೇ ಅಟ್ಯಾಕ್ ಡ್ರೋನ್’ಗಳನ್ನು ನಾಶಪಡಿಸಿವೆ. ಆತ್ಮಹತ್ಯಾ ದಾಳಿಗೆ ಬಳಸುವ ಡ್ರೋನ್‌ಗಳಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಐದನೇ ಡ್ರೋನ್ ಉಡಾವಣೆಗೆ ಸಿದ್ಧವಾಗಿದ್ದ ನಿಯಂತ್ರಣ ಕೇಂದ್ರವನ್ನು ಪತ್ತೆ ಹಚ್ಚಿದ ಅಮೆರಿಕ ಪಡೆಗಳು ಬಂದರ್ ಅಬ್ಬಾಸ್ ಪ್ರದೇಶದಲ್ಲಿ ನಿಖರ ದಾಳಿ ನಡೆಸಿವೆ. ಈ ದಾಳಿಯಲ್ಲಿ ನಿಯಂತ್ರಣ ವ್ಯವಸ್ಥೆಗೆ ಭಾರೀ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಆದರೆ, ಸಾವುನೋವುಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಫೆಬ್ರವರಿ 28ರಿಂದ ಆರಂಭವಾದ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಶಮನವಾಗುವ ಲಕ್ಷಣಗಳು ಇನ್ನೂ ಕಾಣುತ್ತಿಲ್ಲ. ಯುದ್ಧದ ಪರಿಣಾಮ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಮಧ್ಯಪ್ರಾಚ್ಯದ ಉದ್ವಿಗ್ನತೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
ಈ ನಡುವೆ ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಹರಿದಾಡುತ್ತಿದ್ದವು. ಆದರೆ ಮತ್ತೆ ಅಮೆರಿಕ ದಾಳಿ ನಡೆಸಿರುವ ಹಿನ್ನೆಲೆ ಜಾಗತಿಕ ಮಟ್ಟದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಶಾಂತಿ ಒಪ್ಪಂದದ ಭಾಗವಾಗಿ ಹಾರ್ಮುಜ್ ಜಲಸಂಧಿಯ ಸಾಗಾಣಿಕೆಯನ್ನು ಇರಾನ್ ಹಾಗೂ ಓಮಾನ್ ಜಂಟಿಯಾಗಿ ನಿರ್ವಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ ಅಮೆರಿಕ ಅಧ್ಯಕ್ಷ Donald Trump ಈ ಮಾಹಿತಿಯನ್ನು ತಳ್ಳಿ ಹಾಕಿ, ಜಲಮಾರ್ಗ ಮುಕ್ತವಾಗಿಯೇ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಅಮೆರಿಕ ಇರಾನ್ ವಿರುದ್ಧ ಕೊನೆಯದಾಗಿ ರಕ್ಷಣಾತ್ಮಕ ದಾಳಿ ನಡೆಸಿತ್ತು. ಇದನ್ನು ಕದನ ವಿರಾಮ ಉಲ್ಲಂಘನೆ ಎಂದು ಇರಾನ್ ಆರೋಪಿಸಿತ್ತು. ಅಮೆರಿಕದ ದೋಣಿಗಳು ಮತ್ತು ಕ್ಷಿಪಣಿ ಉಡಾವಣಾ ತಾಣಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ಮುಂದುವರಿಸಿದ್ದು, ಇವು ಅಮೆರಿಕದ ಪಡೆಗಳಿಗೆ ನೇರ ಬೆದರಿಕೆಯಾಗಿವೆ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.