ವಾಷಿಂಗ್ಟನ್, ಮೇ 16: ಅಮೆರಿಕ ಅಧ್ಯಕ್ಷ Donald Trump ಅಮೆರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್‌ನ ಪ್ರಮುಖ ನಾಯಕ ಅಬು-ಬಿಲಾಲ್ ಅಲ್-ಮಿನುಕಿಯನ್ನು ಹೊಡೆದುರುಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಆಫ್ರಿಕಾದಲ್ಲಿ ಅಡಗಿಕೊಂಡಿದ್ದ ಆತ ತನ್ನ ಚಟುವಟಿಕೆಗಳು ಯಾರಿಗೂ ತಿಳಿಯುವುದಿಲ್ಲವೆಂದು ಭಾವಿಸಿದ್ದ. ಆದರೆ ಅವನ ಪ್ರತಿಯೊಂದು ಚಲನವಲನದ ಮೇಲೂ ನಮ್ಮ ಕಣ್ಣಿತ್ತು. ಇನ್ನು ಆತ ಯಾರಿಗೂ ಭೀತಿಯ ಕಾರಣವಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ನಿನ್ನೆ ರಾತ್ರಿ (ಅಮೆರಿಕದ ಕಾಲಮಾನ ಪ್ರಕಾರ) ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ನನ್ನ ಆದೇಶದ ಮೇರೆಗೆ ಅಮೆರಿಕದ ಧೈರ್ಯಶಾಲಿ ಪಡೆಗಳು ಹಾಗೂ ನೈಜೀರಿಯಾದ ಸಶಸ್ತ್ರ ಪಡೆಗಳು ವಿಶ್ವದ ಅತ್ಯಂತ ಕ್ರಿಯಾಶೀಲ ಭಯೋತ್ಪಾದಕರಲ್ಲಿ ಒಬ್ಬನ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿವೆ” ಎಂದು ತಿಳಿಸಿದ್ದಾರೆ.
ಪಶ್ಚಿಮ ಆಫ್ರಿಕಾದ ಹಲವು ಪ್ರದೇಶಗಳಲ್ಲಿ ಉಗ್ರ ಜಾಲವನ್ನು ಹೊಂದಿದ್ದ ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗಿನ ಸಂಬಂಧಕ್ಕಾಗಿ ಅಲ್-ಮಿನುಕಿಯನ್ನು 2023ರಲ್ಲಿ ಅಮೆರಿಕ ನಿರ್ಬಂಧ ಪಟ್ಟಿಗೆ ಸೇರಿಸಿತ್ತು. “ಆಫ್ರಿಕಾದ ಜನರಲ್ಲಿ ಭಯ ಹುಟ್ಟಿಸುವುದಾಗಲಿ, ಅಮೆರಿಕನ್ನರ ವಿರುದ್ಧ ಸಂಚು ರೂಪಿಸುವುದಾಗಲಿ ಆತನಿಂದ ಇನ್ನು ಸಾಧ್ಯವಿಲ್ಲ. ಅವನ ಅಧ್ಯಾಯ ಮುಕ್ತಾಯಗೊಂಡಿದೆ” ಎಂದು ಟ್ರಂಪ್ ಹೇಳಿದ್ದಾರೆ.
2023ರಲ್ಲಿ ಅಮೆರಿಕ ಸರ್ಕಾರ ಅಬು-ಬಿಲಾಲ್ ಅಲ್-ಮಿನುಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಆಗಿನ ಅಧ್ಯಕ್ಷ Joe Biden ನೇತೃತ್ವದ ಆಡಳಿತವು ಜೂನ್ 2023ರಲ್ಲಿ ಈ ನಿರ್ಧಾರ ಕೈಗೊಂಡಿತ್ತು. ಅಬು ಬಕರ್ ಮುಹಮ್ಮದ್ ಅಲ್-ಮಿನುಕಿ ಎಂಬ ಹೆಸರಿನಿಂದಲೂ ಪರಿಚಿತನಾಗಿದ್ದ ಆತ ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ತನ್ನ ನೆಲೆ ಹೊಂದಿದ್ದನು.