ಟೆಹ್ರಾನ್: ಹಾರ್ಮುಜ್ (Strait of Hormuz) ಸಮುದ್ರ ಮಾರ್ಗದ ಬಳಿ ಮರದ ಬೋಟ್‌ಗೆ ಬೆಂಕಿ ತಗುಲಿ ಮುಳುಗಿದ ಪರಿಣಾಮ ಭಾರತೀಯ ನಾವಿಕನೊಬ್ಬ (Indian Sailor) ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಬೋಟ್‌ನಲ್ಲಿ ಒಟ್ಟು 18 ಭಾರತೀಯ ಸಿಬ್ಬಂದಿ ಇದ್ದರು. ಅಪಘಾತ ಸಂಭವಿಸಿದ ವೇಳೆ ಸಮೀಪದಲ್ಲಿ ಸಾಗುತ್ತಿದ್ದ ಹಡಗು ಸಿಬ್ಬಂದಿಯನ್ನು ರಕ್ಷಿಸಿದೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗಾಯಾಳು ನಾವಿಕರು ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಿಸಲ್ಪಟ್ಟ ಭಾರತೀಯರನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಭೇಟಿ ಮಾಡಿದ್ದು, ಬೋಟ್ ಮಾಲೀಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಗತ್ಯವಿರುವ ಎಲ್ಲ ನೆರವು ಒದಗಿಸಲಾಗುವುದು ಎಂದು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ವಿಶ್ವದ ತೈಲ ಸಾಗಣೆಯ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಪ್ರಭಾವ ಹೊಂದಿದೆ. ಇದೇ ವೇಳೆ ಇರಾನ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರವಾಗುತ್ತಿರುವ ಸಂದರ್ಭದಲ್ಲೇ ಈ ದುರಂತ ನಡೆದಿದೆ. ಶುಕ್ರವಾರ ಹಾರ್ಮುಜ್ ಪ್ರದೇಶದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಗುಂಡಿನ ಚಕಮಕಿ ನಡೆದಿತ್ತು. ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ಎರಡು ಹಡಗುಗಳ ಮೇಲೆ ದಾಳಿ ನಡೆಸುವ ಮೂಲಕ ಅಮೆರಿಕ ತನ್ನ ಆಕ್ರಮಣ ಆರಂಭಿಸಿದೆ ಎಂದು ಇರಾನ್ ಆರೋಪಿಸಿದೆ.