ನವದೆಹಲಿ: 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನವನ್ನು (Three Language Policy) ಕಡ್ಡಾಯಗೊಳಿಸಿರುವ ಸಿಬಿಎಸ್‌ಇಯ ಹೊಸ ನಿಯಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಅರ್ಜಿ ಸಲ್ಲಿಕೆಯಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಸಿಜೆಐ ಸೂರ್ಯ ಕಾಂತ್ ನೇತೃತ್ವದ ತ್ರಿಸಭ್ಯ ಪೀಠದ ಮುಂದೆ ವಿಚಾರವನ್ನು ಪ್ರಸ್ತಾಪಿಸಿದರು.
9ನೇ ತರಗತಿಯಲ್ಲಿ ಏಕಾಏಕಿ ಎರಡು ಹೆಚ್ಚುವರಿ ಭಾಷೆಗಳನ್ನು ಕಲಿಯಬೇಕಾದ ಅನಿವಾರ್ಯತೆ, 10ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಸಿದ್ಧತೆಗೆ ತೊಂದರೆಯಾಗಲಿದೆ ಹಾಗೂ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರುತ್ತದೆ ಎಂದು ರೋಹಟಗಿ ವಾದಿಸಿದರು. ತಕ್ಷಣ ಹೊಸ ಭಾಷೆಗಳನ್ನು ಕಲಿತು ಮುಂದಿನ ವರ್ಷವೇ ಪರೀಕ್ಷೆ ಬರೆಯುವುದು ಗೊಂದಲಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು. ವಾದ ಆಲಿಸಿದ ಪೀಠ, ಪ್ರಕರಣವನ್ನು ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಹೇಳಿದೆ.
ಈ ಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ಅಡಿಯಲ್ಲಿ ಜಾರಿಗೊಂಡಿರುವ ತ್ರಿಭಾಷಾ ಸೂತ್ರದ ಭಾಗವಾಗಿದೆ. ಈ ನೀತಿಯು ಕನಿಷ್ಠ ಎರಡು ಭಾರತೀಯ ಭಾಷೆಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳು ಹಲವು ಭಾಷೆಗಳನ್ನು ಕಲಿಯಲು ಉತ್ತೇಜನ ನೀಡುತ್ತದೆ. ಆದರೆ, ಯಾವ ಭಾಷೆಗಳನ್ನು ಆಯ್ಕೆ ಮಾಡಬೇಕು ಎಂಬ ಸ್ವಾತಂತ್ರ್ಯವನ್ನು ರಾಜ್ಯಗಳು ಮತ್ತು ಶಾಲೆಗಳಿಗೆ ಬಿಡಲಾಗಿದೆ.
ಈವರೆಗೆ CBSE ವಿದ್ಯಾರ್ಥಿಗಳು 10ನೇ ತರಗತಿಯವರೆಗೆ ಸಾಮಾನ್ಯವಾಗಿ ಇಂಗ್ಲಿಷ್ ಮತ್ತು ಮತ್ತೊಂದು ಭಾಷೆಯನ್ನು ಮಾತ್ರ ಅಭ್ಯಾಸ ಮಾಡುತ್ತಿದ್ದರು. ಆದರೆ, ಹೊಸ ವ್ಯವಸ್ಥೆಯ ಪ್ರಕಾರ 9ನೇ ತರಗತಿಯಿಂದಲೇ ಹೆಚ್ಚುವರಿ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾದ ಪರಿಸ್ಥಿತಿ ಎದುರಾಗಲಿದೆ ಎನ್ನಲಾಗಿದೆ. ಇದರಿಂದ ಪ್ರೌಢಶಿಕ್ಷಣ ಹಂತದಲ್ಲಿ ಭಾಷಾ ವಿಷಯಗಳ ಸಂಖ್ಯೆ ಹೆಚ್ಚಳವಾಗಲಿದೆ.