ನವದೆಹಲಿ: ಮೇ 3ರಂದು ನಡೆದ ನೀಟ್ ಯುಜಿ ಪರೀಕ್ಷೆಯನ್ನು (NEET UG Exam) ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರದ್ದುಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಅಮಾನ್ಯಗೊಳಿಸಲಾಗಿದ್ದು, ಶೀಘ್ರದಲ್ಲೇ ಮರು ಪರೀಕ್ಷೆಯ ದಿನಾಂಕ ಪ್ರಕಟಿಸುವುದಾಗಿ ಎನ್‌ಟಿಎ ತಿಳಿಸಿದೆ.
ರಾಜಸ್ಥಾನದ ಸಿಕಾರ್‌ನಲ್ಲಿ ಮೇ 1ರಂದೇ ‘ಗೇಸ್ ಪೇಪರ್’ (Guess Paper) ರೂಪದಲ್ಲಿ ಪ್ರಶ್ನೆಗಳು ಹರಿದಾಡಿದ್ದವು ಎನ್ನಲಾಗಿದೆ. ಆ ಪತ್ರಿಕೆಯಲ್ಲಿ ಇದ್ದ ಅನೇಕ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಶ್ನೆಗಳು ಮೂಲ ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗಿದ್ದವು ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡ (SOG) ತನಿಖೆ ಆರಂಭಿಸಿದ್ದು, ಮಾಹಿತಿ ಲಭ್ಯವಾಗುತ್ತಿದ್ದಂತೆ ಎನ್‌ಟಿಎ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಒಪ್ಪಿಸಿದೆ. 2024 ಮತ್ತು 2025ರಲ್ಲೂ ಇದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದಿದ್ದವು. ಕಳೆದ ವರ್ಷದ ಪ್ರಕರಣದಲ್ಲಿ ಸಿಬಿಐ ಪಾಟ್ನಾ ಹಾಗೂ ಹಜಾರಿಬಾಗ್‌ನಲ್ಲಿ ಹಲವು ಆರೋಪಿಗಳನ್ನು ಬಂಧಿಸಿತ್ತು.