ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ನ 3ನೇ ಸೆಮಿಸ್ಟರ್ ಅಥವಾ 2ನೇ ವರ್ಷಕ್ಕೆ ಪ್ರವೇಶ ನೀಡುವ ಡಿಸಿಇಟಿ ಹಾಗೂ ಎಂ.ಟೆಕ್/ಎಂಇ ಪ್ರವೇಶ ಪರೀಕ್ಷೆಗಳು ಮೇ 23ರಂದು ನಡೆಯಲಿದ್ದು, ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಈ ಎರಡೂ ಪರೀಕ್ಷೆಗಳು ಬೆಂಗಳೂರು, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮೈಸೂರು ಮತ್ತು ತುಮಕೂರು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಅವರು ವಿವರಿಸಿದ್ದಾರೆ.
ಡಿಸಿಇಟಿ ಪರೀಕ್ಷೆಯನ್ನು 51 ಕೇಂದ್ರಗಳಲ್ಲಿ ಒಟ್ಟು 21,095 ಅಭ್ಯರ್ಥಿಗಳು ಬರೆಯಲಿದ್ದು, ಎಂ.ಟೆಕ್ ಪರೀಕ್ಷೆಯನ್ನು 26 ಕೇಂದ್ರಗಳಲ್ಲಿ 12,116 ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಈ ಎರಡೂ ಕೋರ್ಸ್‌ಗಳಿಗಾಗಿ 34,211 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗಾಗಿ ಕಡ್ಡಾಯ ಕನ್ನಡ ಪರೀಕ್ಷೆ ಕೂಡ ಬೆಂಗಳೂರಿನಲ್ಲಿ ಅದೇ ದಿನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.