ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಯುಜಿ (NEET UG) 2026ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹತ್ವದ ಪರೀಕ್ಷೆ ಮೇ 3 ರಂದು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಒಂದೇ ಅವಧಿಯಲ್ಲಿ ದೇಶದಾದ್ಯಂತ ನಡೆಯಲಿದೆ. 180 ನಿಮಿಷಗಳ ಈ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಂದ ಒಟ್ಟು 180 ಪ್ರಶ್ನೆಗಳು ಕೇಳಲಾಗುತ್ತವೆ. 720 ಅಂಕಗಳ ಈ ಪರೀಕ್ಷೆ ಕುರಿತು ಯಾವುದೇ ಗೊಂದಲ ಉಂಟಾಗದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಡ್ರೆಸ್ ಕೋಡ್ ಮತ್ತು ಉಡುಪು ನಿಯಮಗಳು:
ಪರೀಕ್ಷಾರ್ಥಿಗಳು ಧರಿಸಬೇಕಾದ ಉಡುಪುಗಳ ಬಗ್ಗೆ ಎನ್‌ಟಿಎ ಸ್ಪಷ್ಟ ಸೂಚನೆ ನೀಡಿದೆ. ಅಭ್ಯರ್ಥಿಗಳು ಹಗುರ ಮತ್ತು ಸರಳ ಬಟ್ಟೆಗಳನ್ನು ಧರಿಸಿ ಕೇಂದ್ರಕ್ಕೆ ಬರಲು ಸಲಹೆ ನೀಡಲಾಗಿದೆ. ಪೂರ್ಣ ತೋಳಿನ ಉಡುಪು ಅಥವಾ ದಪ್ಪ ಬಟ್ಟೆಗಳನ್ನು ಧರಿಸುವ ಅಗತ್ಯವಿದ್ದರೆ, ಅಂತಹವರು ತಪಾಸಣೆಗಾಗಿ ಮುಂಚಿತವಾಗಿ ಕೇಂದ್ರಕ್ಕೆ ಆಗಮಿಸಬೇಕು. ಧಾರ್ಮಿಕ ಕಾರಣಗಳಿಂದ ವಿಶೇಷ ಉಡುಪು ಧರಿಸುವವರಿಗೆ ಅವಕಾಶವಿದ್ದರೂ, ಅವರು ಕಟ್ಟುನಿಟ್ಟಿನ ಭದ್ರತಾ ತಪಾಸಣೆಗೆ ಒಳಪಡುವುದರಿಂದ ಸಮಯಕ್ಕಿಂತ ಮುಂಚೆಯೇ ಆಗಮಿಸುವುದು ಕಡ್ಡಾಯವಾಗಿದೆ.
ಪಾದರಕ್ಷೆಗಳು ಮತ್ತು ಪಾರದರ್ಶಕ ವಸ್ತುಗಳು:
ಭದ್ರತಾ ತಪಾಸಣೆ ಸುಗಮವಾಗಲು ಅಭ್ಯರ್ಥಿಗಳು ಚಪ್ಪಲಿ ಅಥವಾ ಕಡಿಮೆ ಹಿಮ್ಮಡಿಯ ಸ್ಯಾಂಡಲ್‌ಗಳನ್ನು ಧರಿಸುವುದು ಸೂಕ್ತ ಎಂದು ಸೂಚಿಸಲಾಗಿದೆ. ಪರೀಕ್ಷಾ ಕೊಠಡಿಗೆ ಕೇವಲ ಪಾರದರ್ಶಕ ನೀರಿನ ಬಾಟಲಿಯನ್ನು ಮಾತ್ರ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಯಾವುದೇ ರೀತಿಯ ಅಕ್ರಮ ನಡೆಯದಂತೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ ಎನ್‌ಟಿಎ.
ಬಯೋಮೆಟ್ರಿಕ್ ಮತ್ತು ಭದ್ರತಾ ಪರಿಶೀಲನೆ:
ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು ಪ್ರತಿಯೊಬ್ಬ ಅಭ್ಯರ್ಥಿಗೂ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ತಾಂತ್ರಿಕ ಸಮಸ್ಯೆ ಅಥವಾ ದೈಹಿಕ ಅಡಚಣೆಗಳಿಂದ ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ಅಂತಹವರು ಕೇಂದ್ರದಲ್ಲಿ ಲಭ್ಯವಿರುವ ಫಾರ್ಮ್‌ನಲ್ಲಿ ಲಿಖಿತ ಒಪ್ಪಂದ ನೀಡುವ ಮೂಲಕ ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲ ಅಭ್ಯರ್ಥಿಗಳೂ ಸಿಬ್ಬಂದಿಯೊಂದಿಗೆ ಸಹಕರಿಸಿ, ಪ್ರಕಟಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎನ್‌ಟಿಎ ಮನವಿ ಮಾಡಿದೆ.