ನವದೆಹಲಿ: ಇರಾನ್‌ನಿಂದ ಭಾರತಕ್ಕೆ ಬರುತ್ತಿದ್ದ ತೈಲ ಟ್ಯಾಂಕರ್ ಚೀನಾಕ್ಕೆ ತಿರುಗಿದೆ ಎಂಬ ಮಾಧ್ಯಮ ವರದಿಗಳನ್ನು ಪೆಟ್ರೋಲಿಯಂ ಸಚಿವಾಲಯ ತಳ್ಳಿ ಹಾಕಿದೆ. ಹಣ ಪಾವತಿ ವ್ಯತ್ಯಯದ ಕಾರಣಕ್ಕೆ ಮಾರ್ಗ ಬದಲಾವಣೆ ನಡೆದಿದೆ ಎಂಬ ಸುದ್ದಿ ತಪ್ಪು ಎಂದು ಸ್ಪಷ್ಟಪಡಿಸಲಾಗಿದೆ. 6 ಲಕ್ಷ ಬ್ಯಾರಲ್ ಕಚ್ಚಾ ತೈಲ ಹೊತ್ತ ಪಿಂಗ್ ಶುನ್ ಟ್ಯಾಂಕರ್ ಖಾರ್ಗ್ ದ್ವೀಪದಿಂದ ಮಾರ್ಚ್ 4ರಂದು ಹೊರಟಿದ್ದು, ಏಪ್ರಿಲ್ 4ರಂದು ಗುಜರಾತ್‌ನ ವಾಡಿನಾರ್ ಬಂದರಿಗೆ ತಲುಪಬೇಕಾಗಿತ್ತು. ಈ ನಡುವೆ ಟ್ಯಾಂಕರ್ ಚೀನಾಕ್ಕೆ ತೆರಳಿದೆಯೆಂಬ ವರದಿಗಳಿಗೆ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.
ಪೆಟ್ರೋಲಿಯಂ ಸಚಿವಾಲಯ ಹೇಳಿದ್ದೇನು?
ಭಾರತದ ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದು ಪ್ರಕ್ರಿಯೆಯಲ್ಲಿ ಯಾವುದೇ ಹಣ ಪಾವತಿ ಸಮಸ್ಯೆಗಳಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ. ‘ಎಕ್ಸ್’ನಲ್ಲಿ ನೀಡಿದ ಹೇಳಿಕೆಯಲ್ಲಿ, ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಕಂಪನಿಗಳಿಗೆ ವಾಣಿಜ್ಯಿಕ ಅಗತ್ಯತೆಗಳ ಆಧಾರದ ಮೇಲೆ ವಿವಿಧ ಮೂಲಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ ಎಂದು ತಿಳಿಸಿದೆ.
ಪಶ್ಚಿಮ ಏಷ್ಯಾ ಪ್ರದೇಶದ ಸಂಘರ್ಷದ ನಡುವೆಯೂ ತೈಲ ಪೂರೈಕೆ ಸುಗಮವಾಗಿದ್ದು, ಇರಾನ್ ಸೇರಿದಂತೆ ವಿವಿಧ ಮೂಲಗಳಿಂದ ಆಮದು ನಿರಂತರವಾಗಿ ನಡೆಯುತ್ತಿದೆ. ತೈಲ ಆಮದುಗೆ ಸಂಬಂಧಿಸಿದಂತೆ ಯಾವುದೇ ಹಣ ಪಾವತಿ ಅಡೆತಡೆಗಳಿಲ್ಲ ಎಂದು ಸಚಿವಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ತೈಲ ಸಾಗಣೆ ಸಂಬಂಧಿಸಿದ ಕೆಲವು ವದಂತಿಗಳು ತಪ್ಪು ತಿಳುವಳಿಕೆಯಿಂದ ಹರಡುತ್ತಿವೆ. ವ್ಯಾಪಾರಿಕ ಲಾಭ ಅಥವಾ ಕಾರ್ಯಾಚರಣೆಯ ಅಗತ್ಯತೆಗಳ ಹಿನ್ನೆಲೆಯಲ್ಲಿ ಸಾಗರ ಮಾರ್ಗದಲ್ಲಿರುವ ಹಡಗುಗಳು ತಮ್ಮ ಗಮ್ಯಸ್ಥಾನವನ್ನು ಮಧ್ಯದಲ್ಲೇ ಬದಲಾಯಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ತಿಳಿಸಿದೆ.
ಎಲ್‌ಪಿಜಿ ಪೂರೈಕೆ ಕುರಿತ ವದಂತಿಗಳನ್ನೂ ಸಚಿವಾಲಯ ತಳ್ಳಿ ಹಾಕಿದೆ. ಇರಾನ್ ಮೂಲದ ಸುಮಾರು 44 ಟಿಎಂಟಿ ಎಲ್‌ಪಿಜಿ ಹೊತ್ತ ‘ಸೀ ಬರ್ಡ್’ ನೌಕೆ ಏಪ್ರಿಲ್ 2ರಂದು ಮಂಗಳೂರು ಬಂದರಿಗೆ ತಲುಪಿದ್ದು, ಅನಿಲ ಇಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದೃಢಪಡಿಸಿದೆ.
ಭಾರತದತ್ತ ‘ಗ್ರೀನ್ ಸಾನ್ವಿ’ ಪ್ರಯಾಣ...
ಸುಮಾರು 46,650 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಭಾರತದ ಧ್ವಜದ ‘ಗ್ರೀನ್ ಸಾನ್ವಿ’ ನೌಕೆಯು ಶುಕ್ರವಾರ ರಾತ್ರಿ ಸುರಕ್ಷಿತವಾಗಿ ಹೊರ್ಮುಜ್ ಜಲಸಂಧಿಯನ್ನು ದಾಟಿದ್ದು, ಭಾರತ ಕಡೆಗೆ ಸಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.