ಬೆಂಗಳೂರು: ಕೆಪಿಎಸ್ ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಮಂಗಳವಾರ ನಡೆದ ಕಿಯೋನಿಕ್ಸ್‌ನ ೫೦ನೇ ಸಂಸ್ಥಾಪನಾ ದಿನಾಚರಣೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಕೆಪಿಎಸ್ ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಗಳು ಹೀಗೆಲ್ಲಾ ಮಾಡುತ್ತಿದ್ದಾರೆ. ಅಲ್ಲಿರುವ ಸದಸ್ಯರು ಅಂಗಡಿಯನ್ನೇ ತೆರೆದಿದ್ದಾರೆ. ನಮ್ಮ ಪೊಲೀಸ್ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಒಂದು ದಿನ ಎಲ್ಲವೂ ಹೊರಗೆ ಬರುತ್ತದೆ ಎಂದರು.
ಹೈಕೋರ್ಟ್ ಎಸ್ ಐಟಿ ರಚನೆಗೆ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇಡಿ ಕೂಡ ತನಿಖೆ ಮಾಡುತ್ತಿದೆ. ಆದರೆ, ನಮ್ಮ ಪೊಲೀಸ್ ಇಲಾಖೆಯೂ ತನಿಖೆಯನ್ನು ಬಹಳ ಚೆನ್ನಾಗಿ ನಡೆಸುತ್ತಿದೆ. ನ್ಯಾಯಾಲಯ ಅಗತ್ಯವಿದ್ದರೆ ನಮ್ಮ ಪೊಲೀಸ್ ಇಲಾಖೆಯ ತನಿಖೆಯ ವೈಖರಿಯ ಉಸ್ತುವಾರಿ ನೋಡಬಹುದಿತ್ತು. ನ್ಯಾಯಾಲಯ ಎಸ್ ಐಟಿ ತನಿಖೆಗೆ ನಿರ್ದೇಶಿಸಿರುವುದು ಸರಿ. ಆದರೆ, ತನಿಖಾಧಿಕಾರಿಗಳ ನೇಮಕದ ಸ್ವಾತಂತ್ರ್ಯವನ್ನು ರಾಜ್ಯಸರ್ಕಾರಕ್ಕೆ ಕೊಡಬೇಕಿತ್ತು. ಈ ಬಗ್ಗೆ ದೆಹಲಿ, ಬೇರೆ ಬೇರೆ ರಾಜ್ಯಗಳಿಂದ ನಮಗೆ ಕರೆ ಬಂದಿತ್ತು. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ ಎಂದು ಹೇಳಿದರು.