ಹೈಲೈಟ್ಸ್:
ದೇಶದಲ್ಲಿ ಸಗಟು ಹಣದುಬ್ಬರ ಶೇ.8.3ಕ್ಕೆ ಏರಿಕೆ, 24 ತಿಂಗಳಲ್ಲೇ ಗರಿಷ್ಠ ಮಟ್ಟ
ಮಧ್ಯಪ್ರಾಚ್ಯ ಉದ್ವಿಗ್ನತೆ ಮತ್ತು ಜಾಗತಿಕ ತೈಲ ದರ ಏರಿಕೆಯಿಂದ ಬೆಲೆ ಏರಿಕೆ ಹೊರೆ
ಇಂಧನ, ಲೋಹ, ಜವಳಿ, ಆಹಾರೇತರ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ
ಹೊಸದಿಲ್ಲಿ: ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮ ಭಾರತದಲ್ಲೂ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ.8.3ಕ್ಕೆ ಏರಿಕೆಯಾಗಿ ಕಳೆದ ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಮಾರ್ಚ್‌ನಲ್ಲಿ ಇದು ಶೇ.3.88 ರಷ್ಟಿದ್ದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಕೇವಲ ಶೇ.0.85 ರಷ್ಟಿತ್ತು. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದೇ ಒಟ್ಟಾರೆ ಹಣದುಬ್ಬರ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಜಾಗತಿಕ ಬ್ರೋಕರೇಜ್ ಸಂಸ್ಥೆ ಬಾರ್ಕ್ಲೇಸ್ ಪ್ರಕಾರ, ಲೋಹಗಳು, ರಾಸಾಯನಿಕಗಳು ಮತ್ತು ಜವಳಿ ಉತ್ಪನ್ನಗಳ ತಯಾರಿಕಾ ವೆಚ್ಚ ಏರಿಕೆಯಿಂದ ಮೂಲ ಸಗಟು ಹಣದುಬ್ಬರವು ವಾರ್ಷಿಕ ಆಧಾರದ ಮೇಲೆ ಶೇ.5ಕ್ಕೆ ತಲುಪಿದೆ. ಇಂಧನ ಮತ್ತು ಶಕ್ತಿ ವಿಭಾಗದಲ್ಲಿ ಹಣದುಬ್ಬರ ಮಾರ್ಚ್‌ನ ಶೇ.1.05ರಿಂದ ಏಪ್ರಿಲ್‌ನಲ್ಲಿ ಶೇ.24.71ಕ್ಕೆ ಏರಿಕೆಯಾಗಿ 42 ತಿಂಗಳ ಗರಿಷ್ಠ ಮಟ್ಟ ದಾಖಲಿಸಿದೆ.
ಕಚ್ಚಾ ಪೆಟ್ರೋಲಿಯಂ ವಿಭಾಗದಲ್ಲಿ ಹಣದುಬ್ಬರವು ಶೇ.88.06ಕ್ಕೆ ಜಿಗಿದಿದ್ದು, ಇದು 2021ರ ಅಕ್ಟೋಬರ್ ನಂತರದ ಅತಿ ಹೆಚ್ಚಿನ ಮಟ್ಟವಾಗಿದೆ. ಮಧ್ಯಪ್ರಾಚ್ಯ ಉದ್ವಿಗ್ನತೆ ಮತ್ತು ಹೊರ್ಮುಜ್ ಜಲಸಂಧಿಯ ಅನಿಶ್ಚಿತತೆ ಭಾರತಕ್ಕೆ ಕಚ್ಚಾ ತೈಲ ಆಮದು ವೆಚ್ಚವನ್ನು ಹೆಚ್ಚಿಸಿದೆ. ಜಾಗತಿಕ ಕಚ್ಚಾ ತೈಲ ದರ ಏರಿಕೆಯ ಪರಿಣಾಮ ಇಂಧನ ಆಮದು ಮತ್ತಷ್ಟು ದುಬಾರಿಯಾಗಿದೆ ಎಂದು ಸಚಿವಾಲಯ ಹೇಳಿದೆ.
ಏಪ್ರಿಲ್ ತಿಂಗಳ ಹಣದುಬ್ಬರ ಏರಿಕೆಗೆ ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಮೂಲ ಲೋಹಗಳು, ಉತ್ಪಾದಿತ ವಸ್ತುಗಳು ಮತ್ತು ಆಹಾರೇತರ ವಸ್ತುಗಳ ಬೆಲೆ ಏರಿಕೆಯೇ ಪ್ರಮುಖ ಕಾರಣವಾಗಿದೆ. ಬಾರ್ಕ್ಲೇಸ್ ವರದಿ ಪ್ರಕಾರ, ಈ ಬಾರಿ ಸಗಟು ಹಣದುಬ್ಬರದಲ್ಲಿ ಕಂಡುಬಂದ ಏರಿಕೆ ಇತ್ತೀಚಿನ ಅವಧಿಯಲ್ಲೇ ಅತಿ ದೊಡ್ಡ ಜಿಗಿತವಾಗಿದೆ.
ಆಹಾರ ಪದಾರ್ಥಗಳ ಹಣದುಬ್ಬರ ಮಾರ್ಚ್‌ನ ಶೇ.1.90ರಿಂದ ಏಪ್ರಿಲ್‌ನಲ್ಲಿ ಶೇ.1.98ಕ್ಕೆ ಏರಿಕೆಯಾಗಿದೆ. ಆಹಾರೇತರ ವಸ್ತುಗಳಲ್ಲಿ ಹಣದುಬ್ಬರವು ಶೇ.11.5ರಿಂದ ಶೇ.12.18ಕ್ಕೆ ಏರಿದೆ. ಉತ್ಪಾದಿತ ವಸ್ತುಗಳ ಹಣದುಬ್ಬರವು ಶೇ.3.39ರಿಂದ ಶೇ.4.62ಕ್ಕೆ ಹೆಚ್ಚಳ ಕಂಡಿದೆ. ಇದೇ ವೇಳೆ ಎಲ್‌ಪಿಜಿ ಹಣದುಬ್ಬರವು ಮಾರ್ಚ್‌ನಲ್ಲಿ ಮೈನಸ್ ಶೇ.1.54ರಷ್ಟಿದ್ದರೆ, ಏಪ್ರಿಲ್‌ನಲ್ಲಿ ಶೇ.10.29ಕ್ಕೆ ಜಿಗಿದಿದೆ. ಹೀಗಾಗಿ ಇಂಧನದಿಂದ ಹಿಡಿದು ದಿನನಿತ್ಯದ ವಸ್ತುಗಳವರೆಗೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಬೆಲೆ ಏರಿಕೆಯ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ.