ಮುಂಬೈ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಅಮೆರಿಕಾ-ಇರಾನ್ ಮಾತುಕತೆ ವಿಫಲವಾದ ಪರಿಣಾಮ ಜಾಗತಿಕ ಕಚ್ಚಾ ತೈಲದ ದರ ಏರಿಕೆಯಾಗಿದ್ದು, ಇದರ ನೇರ ಪರಿಣಾಮವಾಗಿ ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಭಾರೀ ಕುಸಿತಕ್ಕೆ ಒಳಗಾಗಿದೆ.
ಆರಂಭಿಕ ವಹಿವಾಟಿನಲ್ಲೇ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 1,000 ಅಂಕಗಳಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರಲ್ಲಿ ಭೀತಿ ಮತ್ತು ಅನಿಶ್ಚಿತತೆ ಹೆಚ್ಚಿಸಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 845.68 ಅಂಕ ಕುಸಿದು 76,482.51 ಮಟ್ಟ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 237.90 ಅಂಕ ಇಳಿದು 23,936.85ರಲ್ಲಿ ವಹಿವಾಟು ನಡೆಸಿತು.
ಸೆನ್ಸೆಕ್ಸ್ ಪಟ್ಟಿಯ ಪ್ರಮುಖ ಕಂಪನಿಗಳಾದ ಟೈಟನ್, ಇಂಟರ್‌ಗ್ಲೋಬ್ ಏವಿಯೇಷನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರ್ತಿ ಏರ್‌ಟೆಲ್, ಮಹೀಂದ್ರಾ & ಮಹೀಂದ್ರಾ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿದರೆ, ಎನ್‌ಟಿಪಿಸಿ ಹಾಗೂ ಎಚ್‌ಸಿಎಲ್ ಟೆಕ್ ಷೇರುಗಳು ಮಾತ್ರ ಲಾಭದ ಹಾದಿಯಲ್ಲಿ ಸಾಗಿದವು.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 4.32 ಪ್ರತಿಶತ ಏರಿಕೆ ಕಂಡು 105.7 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಶಾಂತಿ ಪ್ರಸ್ತಾವವನ್ನು “ಸ್ವೀಕಾರಾರ್ಹವಲ್ಲ” ಎಂದು ತಿರಸ್ಕರಿಸಿರುವುದು ಹೂಡಿಕೆ ಮಾರುಕಟ್ಟೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಎನ್‌ರಿಚ್ ಮನಿ ಸಂಸ್ಥೆಯ ಸಿಇಒ ಪೊನ್‌ಮುದಿ ಆರ್ ಅವರ ಪ್ರಕಾರ, ಹಾರ್ಮುಜ್ ಜಲಸಂಧಿಯ ಉದ್ವಿಗ್ನತೆ ಹಾಗೂ ಇಂಧನ ಸರಬರಾಜಿನ ಅನಿಶ್ಚಿತತೆ ಜಾಗತಿಕ ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆಯಾಗಿದೆ.
ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಅವರು, “ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ತಕ್ಷಣ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಕಚ್ಚಾ ತೈಲದ ಬೆಲೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದ್ದು, ಭಾರತದ ಚಾಲ್ತಿ ಖಾತೆ ಕೊರತೆಯ ಮೇಲೂ ಒತ್ತಡ ಹೆಚ್ಚಬಹುದು” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ದೇಶದ ಜನತೆಗೆ ಇಂಧನ ಉಳಿತಾಯ ಮಾಡಲು, ಚಿನ್ನ ಖರೀದಿಯನ್ನು ಮುಂದೂಡಲು ಹಾಗೂ ಅಗತ್ಯವಿಲ್ಲದ ವಿದೇಶ ಪ್ರವಾಸಗಳನ್ನು ತಾತ್ಕಾಲಿಕವಾಗಿ ತಪ್ಪಿಸಲು ಮನವಿ ಮಾಡಿದ್ದಾರೆ. ಮಧ್ಯಪ್ರಾಚ್ಯ ಸಂಘರ್ಷದಿಂದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಕಳೆದ ಶುಕ್ರವಾರ ವಿದೇಶಿ ಸಂಸ್ಥಾ ಹೂಡಿಕೆದಾರರು (FIIs) ರೂ.4,110.60 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಇದೇ ವೇಳೆ ಶುಕ್ರವಾರದ ವಹಿವಾಟಿನಲ್ಲೂ ಸೆನ್ಸೆಕ್ಸ್ 516.33 ಅಂಕ ಹಾಗೂ ನಿಫ್ಟಿ 150.50 ಅಂಕ ಕುಸಿತ ಕಂಡಿತ್ತು.