ಚಿಕ್ಕಬಳ್ಳಾಪುರ: ಕಳೆದ ಬಾರಿ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ರೈತರಿಗೆ ಈ ಬಾರಿ ದ್ರಾಕ್ಷಿ ಬೆಳೆ (Grapes Crop) ಆಶಾಕಿರಣವಾಗಿದೆ. ವಿಶೇಷವಾಗಿ ದಿಲ್ ಖುಷ್ ದ್ರಾಕ್ಷಿಗೆ (Dilkush Grapes) ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಬೆಳೆಗಾರರ ಮುಖದಲ್ಲಿ ನಗು ಮೂಡಿಸಿದೆ.
ಹೌದು. ದ್ರಾಕ್ಷಿ ಬೆಳೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೂವು, ಹಣ್ಣು, ತರಕಾರಿಗಳ ಜೊತೆಗೆ ದ್ರಾಕ್ಷಿ ಬೆಳೆ ಕೂಡ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ವಿವಿಧ ತಳಿಯ ದ್ರಾಕ್ಷಿಗಳು ಕೆಜಿ 40 ರಿಂದ 140 ರೂ.ವರೆಗೆ ಮಾರಾಟವಾಗುತ್ತಿವೆ. ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ (US-Israel vs Iran War) ಪರಿಣಾಮವಾಗಿ ಆಲೂಗಡ್ಡೆ ಮತ್ತು ಬೆಂಗಳೂರು ಗುಲಾಬಿ ಈರುಳ್ಳಿ ರಫ್ತು ಕುಂಠಿತಗೊಂಡು ರೈತರು ನಷ್ಟ ಅನುಭವಿಸಿದ್ದರು. ಆದರೆ ದ್ರಾಕ್ಷಿಗೆ ಉತ್ತಮ ದರ ಸಿಗುತ್ತಿರುವುದು ಅವರಿಗೆ ನಿಟ್ಟುಸಿರು ತರಿಸಿದೆ. ಕಳೆದ ವರ್ಷ ದಿಲ್ ಖುಷ್ ದ್ರಾಕ್ಷಿ ಕೆಜಿ 25-30 ರೂ.ಗೆ ಮಾರಾಟವಾಗಿದ್ದರೆ, ಈ ವರ್ಷ 40 ರೂ.ಗೆ ಏರಿಕೆಯಾಗಿದೆ. ಪ್ರಸ್ತುತ ದರ ಲಾಭದಾಯಕವಾಗಿದ್ದು, ಆಲಿಕಲ್ಲು ಮತ್ತು ಅಕಾಲಿಕ ಮಳೆ ಬೀಳಬಾರದು ಎಂಬುದು ರೈತರ ಆಶೆಯಾಗಿದೆ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಮರಳುಕುಂಟೆ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ದ್ರಾಕ್ಷಿ ತೋಟಗಳತ್ತ ಕಣ್ಣಾಯಿಸಿದರೆ ಗೊಂಚಲುಗಳಾಗಿ ನೇತಾಡುವ ದ್ರಾಕ್ಷಿ ಗೊನೆಗಳು ಕಣ್ಣಿಗೆ ಹಬ್ಬವಾಗುತ್ತವೆ. ಉತ್ತಮ ಫಸಲು ಬಂದಿದ್ದು ಹಲವೆಡೆ ಕಟಾವು ಆರಂಭವಾಗಿದೆ. ಆದರೆ ಆಲಿಕಲ್ಲು ಮತ್ತು ಅಕಾಲಿಕ ಮಳೆಯ ಭೀತಿ ರೈತರನ್ನು ಕಾಡುತ್ತಿದೆ. ಕಳೆದ ಮಾರ್ಚ್‌ನಲ್ಲಿ ಬಿದ್ದ ಆಲಿಕಲ್ಲು ಸಹಿತ ಮಳೆಯಿಂದ ದ್ರಾಕ್ಷಿ ಬೆಳೆ ನೆಲಕಚ್ಚಿ ದೊಡ್ಡ ಪ್ರಮಾಣದ ನಷ್ಟ ಉಂಟಾಯಿತು. ಈಗ ಉತ್ತಮ ದರ ದೊರೆಯುತ್ತಿರುವ ಸಂದರ್ಭದಲ್ಲಿ ಮಳೆ ಅಥವಾ ಆಲಿಕಲ್ಲು ಬಿದ್ದರೆ ಮತ್ತೆ ದೊಡ್ಡ ಹಾನಿಯಾಗುವ ಆತಂಕವಿದೆ.
ಯಾವ ತಳಿಯ ದ್ರಾಕ್ಷಿಗೆ ಎಷ್ಟು ದರ?
ದ್ರಾಕ್ಷಿ ತಳಿ - ದಿಲ್ ಖುಷ್ - 40 ರೂ.
ಶರತ್ - 100 ರೂ.
ಸರಿತಾ ಕೃಷ್ಣ – 120 ರೂ.
ರೆಡ್ ಗ್ಲೋಬ್ - 140 ರೂ.
ಕಳೆದ ವರ್ಷದ ಹೋಲಿಕೆಯಲ್ಲಿ ಈ ಬಾರಿ ದ್ರಾಕ್ಷಿಗೆ ಉತ್ತಮ ಮಾರುಕಟ್ಟೆ ದರ ಸಿಗುತ್ತಿದೆ. ದಿಲ್ ಖುಷ್ ದ್ರಾಕ್ಷಿ ಕೆಜಿ 40 ರೂ.ಗೆ ಮಾರಾಟವಾಗುತ್ತಿದ್ದು, ರೆಡ್ ಗ್ಲೋಬ್ ದ್ರಾಕ್ಷಿ ಕೆಜಿ 140 ರಿಂದ 150 ರೂ.ವರೆಗೆ ಮಾರಾಟವಾಗುತ್ತಿದೆ.