ತುಮಕೂರು: ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ತಾಪಮಾನ ಹಾಗೂ ಪರಿಸರ ಅಸಮತೋಲನದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಜ಼್ಇಂಡಿಯಾ ಸಂಸ್ಥೆ ಮತ್ತು Trees for All ಸಹಯೋಗದೊಂದಿಗೆ ತುಮಕೂರು ತಾಲ್ಲೂಕು ದೇವಲಾಪುರ ಗ್ರಾಮ ಪಂಚಾಯಿತಿಯ 10 ಹಳ್ಳಿಗಳಲ್ಲಿ ಮತ್ತು ಸಿರಾ ತಾಲ್ಲೂಕಿನ ಸೀಬಿ ಪಂಚಾಯ್ತಿಯ 9 ಹಳ್ಳಿಗಳಲ್ಲಿ ವಿವಿಧ ಜಾತಿಯ ಒಟ್ಟು 2,400 ಗಿಡಗಳನ್ನು ವಿತರಿಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಉಷ್ಣತೆ, ಮಳೆಯ ಪ್ರಮಾಣದಲ್ಲಿ ಏರುಪೇರು, ಬರಗಾಲ ಹಾಗೂ ಪರಿಸರ ಅಸಮತೋಲನದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಮರಗಳು ಹಾಗೂ ಸಸ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೀಬಿ ಮತ್ತು ದೇವಲಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಚೇರಿಗಳು, ದೇವಸ್ಥಾನಗಳು, ರಸ್ತೆ ಬದಿಗಳು ಹಾಗೂ ಸಮುದಾಯ ಭವನಗಳ ಆವರಣದಲ್ಲಿ ನೆಟ್ಟು ಬೆಳೆಸಲು ಗಿಡಗಳನ್ನು ವಿತರಿಸಲಾಯಿತು. ನುಗ್ಗೆ, ಕರಿಬೇವು, ಸಪೋಟ, ಸೀಬೆ, ಹೊಂಗೆ, ಬೇವು, ಕಾಡು ಬಾದಾಮಿ, ಗಸಗಸೆ, ಸಂಪಿಗೆ, ಪಾರಿಜಾತ, ಮಹಾಗನಿ ಹಾಗೂ ಬೆಟ್ಟದ ನೆಲ್ಲಿ ಸೇರಿದಂತೆ ಒಟ್ಟು 12 ವಿವಿಧ ಜಾತಿಯ ಗಿಡಗಳನ್ನು ನೀಡಲಾಗಿದೆ.
ಮರಗಳನ್ನು ಬೆಳೆಸುವುದರಿಂದ ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ನಿಯಂತ್ರಿಸಲು, ಮಣ್ಣಿನ ಸಂರಕ್ಷಣೆ, ಜೀವವೈವಿಧ್ಯ ರಕ್ಷಣೆ ಹಾಗೂ ಸ್ಥಳೀಯ ಪರಿಸರದ ಸಮತೋಲನ ಕಾಪಾಡಲು ನೆರವಾಗುತ್ತದೆ. ಆಹಾರ, ನೆರಳು ಮತ್ತು ಪರಿಸರದ ದೃಷ್ಟಿಯಿಂದ ಉಪಯುಕ್ತವಾದ ವಿವಿಧ ಜಾತಿಯ ಗಿಡಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಜೊತೆಗೆ ಗ್ರಾಮಸ್ಥರಿಗೆ ಮತ್ತು ಮಕ್ಕಳಿಗೆ ಹಸಿರು ಜೀವನಶೈಲಿಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.
ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದರಿಂದ ಗಿಡಗಳನ್ನು ನೆಟ್ಟು ಬೆಳೆಸಲು ಅನುಕೂಲಕರ ವಾತಾವರಣವಿದ್ದು, ವಿತರಿಸಲಾದ ಗಿಡಗಳನ್ನು ಸೂಕ್ತ ಸ್ಥಳಗಳಲ್ಲಿ ನೆಟ್ಟು, ನಿಯಮಿತವಾಗಿ ನೀರುಣಿಸಿ ಸಂರಕ್ಷಿಸುವಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಸಿಬ್ಬಂದಿಗೆ ಮನವಿ ಮಾಡಲಾಯಿತು. ಗಿಡ ನೆಡುವುದು ಮಾತ್ರವಲ್ಲದೆ, ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಬಜ಼್ಇಂಡಿಯಾ ಸಂಸ್ಥೆಯು ಈ ಹಿಂದೆ ಕೂಡ ಗ್ರಾಮೀಣ ಪ್ರದೇಶಗಳ ಹಸಿರೀಕರಣಕ್ಕೆ ಒತ್ತು ನೀಡಿದ್ದು, ಕಳೆದ ವರ್ಷ ಮತ್ತು ಈ ವರ್ಷ ಒಟ್ಟು 29900 ಗಿಡಗಳನ್ನು ವಿತರಿಸಲಾಗಿದೆ, ಪರಿಸರ ಸಂರಕ್ಷಣೆಯ ಭಾಗವಾಗಿ ವಿವಿಧ ಗ್ರಾಮಗಳಲ್ಲಿ ಸಾವಿರಾರು ಸಸಿಗಳನ್ನು ವಿತರಿಸಿ ಬೆಳೆಸುವ ಕಾರ್ಯಕ್ಕೆ ಉತ್ತೇಜನ ನೀಡಿದೆ. ಈ ರೀತಿಯ ನಿರಂತರ ಹಸಿರು ಕಾರ್ಯಕ್ರಮಗಳು ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸಲು ಸ್ಥಳೀಯ ಮಟ್ಟದಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಲಿವೆ.
ಕಾರ್ಯಕ್ರಮದಲ್ಲಿ ಬಜ಼್ ಇಂಡಿಯಾ ಸಂಸ್ಥೆಯ ಗ್ರೀನ್ ಅಸೋಸಿಯೇಟ್ ಮಂಜುಳ ಜಿ.ಪಿ, ಸಂಸ್ಥೆಯ ಹಸಿರು ಪ್ರೇರಕರು,ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.