ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಂದು ವ್ಯತ್ಯಾಸ ಕಂಡುಬಂದಿದ್ದು, ನಿನ್ನೆ ಸ್ವಲ್ಪ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಆದರೆ ಬೆಳ್ಳಿ ದರ ಸ್ಥಿರವಾಗಿದೆ.
ಹೈಲೈಟ್ಸ್:
ತೈಲ ಬೆಲೆ ಹಾಗೂ ಯುದ್ಧದ ಉದ್ವಿಗ್ನತೆ ಚಿನ್ನದ ಮೇಲೆ ಪರಿಣಾಮ ಬೀರಿದೆ
ಚಿನ್ನ-ಬೆಳ್ಳಿ ಸುರಕ್ಷಿತ ಹೂಡಿಕೆಗಳಾಗಿ ಮತ್ತೆ ಬಲ ಪಡೆದುಕೊಂಡಿವೆ
ಚಿನ್ನದ ದರ ಏರಿಕೆಯಾಗಿದ್ದು, 22 ಕ್ಯಾರೆಟ್ 10 ಗ್ರಾಂ ಬೆಲೆ 1.40 ಲಕ್ಷ ದಾಟಿದೆ
ಬೆಂಗಳೂರು: ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮವಾಗಿ ತೈಲ ಬೆಲೆಯಲ್ಲಿ ಉಂಟಾಗುತ್ತಿರುವ ಏರಿಳಿತ ಚಿನ್ನ ಮತ್ತು ಬೆಳ್ಳಿ ದರಗಳ ಮೇಲೂ ಪ್ರಭಾವ ಬೀರಿದ್ದು, ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದಿದೆ. ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ₹1470 ಏರಿಕೆಯಾಗಿದೆ ಎಂದು ಗುಡ್‌ರಿಟರ್ನ್ಸ್ ವರದಿ ತಿಳಿಸಿದೆ.
ಶುದ್ಧ ಚಿನ್ನದ ಇಂದಿನ ದರ ಎಷ್ಟು?
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ 1 ಗ್ರಾಂ ದರದಲ್ಲಿ ₹135 ಏರಿಕೆಯಾಗಿ ₹14,110 ಆಗಿದ್ದು, 10 ಗ್ರಾಂ ದರ ₹1,350 ಹೆಚ್ಚಾಗಿ ₹1,41,100ಕ್ಕೆ ತಲುಪಿದೆ.
ಬೆಳ್ಳಿ ದರ ಸ್ಥಿರ
ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಗ್ರಾಂ ₹255 ಆಗಿದ್ದು, ಕೆಜಿ ದರ ₹2,55,000 ಇದೆ.
ಚಿನ್ನ-ಬೆಳ್ಳಿ ದರದಲ್ಲಿ ಏರುಪೇರಿಗಳು
ಇರಾನ್-ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿ, ಡಾಲರ್ ಮೌಲ್ಯದ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಚಲನೆ ಕಂಡುಬರುತ್ತಿದೆ.
ಬೆಲೆ ಏರಿಳಿತಕ್ಕೆ ಕಾರಣಗಳು
ಕಚ್ಚಾ ತೈಲದ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಬ್ರೆಂಟ್ ಕಚ್ಚಾ ತೈಲದ ದರ ಸೋಮವಾರ ಶೇ.7.4ರಷ್ಟು ಏರಿ ಬ್ಯಾರೆಲ್‌ಗೆ $102.23 ಆಗಿದೆ.
ಇದೇ ವೇಳೆ ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೇಟ್ (WTI) ಕಚ್ಚಾ ತೈಲದ ಬೆಲೆ ಶೇ.7.31ರಷ್ಟು ಏರಿ ಬ್ಯಾರೆಲ್‌ಗೆ $103.88 ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ರೆಂಟ್ ದರ $64.70 ಇದ್ದು, ಈಗ ಸುಮಾರು 60% ಹೆಚ್ಚಾಗಿದೆ. ಈ ಏರಿಕೆ ಇತರೆ ಮಾರುಕಟ್ಟೆಗಳ ಮೇಲೂ ಸರಣಿ ಪರಿಣಾಮ ಬೀರಿದೆ.
ಅಮೆರಿಕದಲ್ಲಿ ಮಾರ್ಚ್ ತಿಂಗಳಲ್ಲಿ ಹಣದುಬ್ಬರ ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಶಾಂತಿ ಮಾತುಕತೆ ವಿಫಲವಾಗಿರುವುದು ಹಾಗೂ ತೈಲ ಬೆಲೆ ಏರಿಕೆಯಿಂದ ಷೇರು ಮಾರುಕಟ್ಟೆ ಕುಸಿತ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.
ಏಷ್ಯಾದ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕೊಸ್ಪಿ, ಜಪಾನ್‌ನ ನಿಕೈ 225, ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕಗಳು ಇಳಿಕೆಯಾಗಿದ್ದು, ಶಾಂಘೈ SSE ಸೂಚ್ಯಂಕ ಸ್ವಲ್ಪ ಏರಿಕೆಯಾಗಿದೆ. ಐರೋಪ್ಯ ಮಾರುಕಟ್ಟೆಯೂ ಇಳಿಮುಖವಾಗಿದೆ.
ಚಿಲ್ಲರೆ ಹಣದುಬ್ಬರ ಏರಿಕೆ
ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರದ ಮೇಲೆ ಮಾರ್ಚ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.3.4ಕ್ಕೆ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಇದು ಶೇ.3.21 ಇತ್ತು. ಗ್ರಾಮೀಣ ಪ್ರದೇಶದಲ್ಲಿ ಶೇ.3.63 ಮತ್ತು ನಗರ ಪ್ರದೇಶದಲ್ಲಿ ಶೇ.3.11 ದಾಖಲಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.
ಆರ್‌ಬಿಐ ಮಾರ್ಚ್‌ನಲ್ಲಿ ಹಣದುಬ್ಬರ ಶೇ.4ರಷ್ಟಿರಬಹುದು ಎಂದು ಅಂದಾಜು ಮಾಡಿತ್ತು. ಈ ಅವಧಿಯಲ್ಲಿ ಚಿನ್ನ, ಬೆಳ್ಳಿ, ತೆಂಗು, ಟೊಮೆಟೊ ಮತ್ತು ಹೂಕೋಸು ಬೆಲೆಗಳು ಏರಿಕೆಯಾದವು.
ರೂಪಾಯಿ ಮೌಲ್ಯ ಕುಸಿತ
ಅಮೆರಿಕಾ-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 56 ಪೈಸೆ ಕುಸಿದು ₹93.39ಕ್ಕೆ ಇಳಿದಿದೆ. ತೈಲ ಬೆಲೆ ಏರಿಕೆಯಿಂದ ಡಾಲರ್ ಬಲವಾಗಿದ್ದು, ರೂಪಾಯಿ ಮೇಲೆ ಒತ್ತಡ ಹೆಚ್ಚಿಸಿದೆ.