ಹೊಸದಿಲ್ಲಿ: ಪಾಕಿಸ್ತಾನದ ಪ್ರಮುಖ ನಗರ ಲಾಹೋರ್‌ನಲ್ಲಿ ಬೀದಿ ಹೆಸರುಗಳ ದೊಡ್ಡಮಟ್ಟದ ಮರುನಾಮಕರಣ ನಡೆಯುತ್ತಿದ್ದು, ಇಸ್ಲಾಮಿಕ್ ಹೆಸರುಗಳನ್ನು ತೆಗೆದು ಮತ್ತೆ ಹಳೆಯ ಹಿಂದೂ, ಸಿಖ್ ಮತ್ತು ಬ್ರಿಟಿಷ್ ಕಾಲದ ಹೆಸರುಗಳನ್ನು ಮರುಸ್ಥಾಪಿಸಲಾಗುತ್ತಿದೆ. ಇಸ್ಲಾಂಪುರವನ್ನು ‘ಕೃಷ್ಣ ನಗರ’ ಎಂದು, ರೆಹಮಾನ್ ಗಲ್ಲಿಯನ್ನು ‘ರಾಮ್ ಗಲ್ಲಿ’ ಎಂದು ಬದಲಾಯಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಈ ಕ್ರಮವನ್ನು ಸಾಂಸ್ಕೃತಿಕ ಪರಂಪರೆಯ ಪುನರುಜ್ಜೀವನದ ಹೆಸರಿನಲ್ಲಿ ಕೈಗೊಳ್ಳಲಾಗುತ್ತಿದೆಯೇ ಅಥವಾ ರಾಜಕೀಯ ಸಂದೇಶವೊಂದರ ಭಾಗವೇ ಎಂಬ ಪ್ರಶ್ನೆಗಳು ಎದ್ದಿವೆ.
ಲಾಹೋರ್‌ನ ಹಲವು ಪ್ರಮುಖ ಬೀದಿಗಳಿಗೆ ದಶಕಗಳ ಹಿಂದೆ ಅಳಿಸಲಾದ ಹಿಂದೂ ಮತ್ತು ಸಿಖ್ ಹೆಸರುಗಳನ್ನು ಮತ್ತೆ ನೀಡಲಾಗುತ್ತಿದ್ದು, ನಗರದಲ್ಲಿ ಐತಿಹಾಸಿಕ ಗುರುತನ್ನು ಮರುಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಇಸ್ಲಾಂಪುರ ಸೇರಿದಂತೆ ಅನೇಕ ಪ್ರದೇಶಗಳನ್ನು ಕೃಷ್ಣ ನಗರ, ಸಂತ ನಗರ ಎಂಬ ಹಳೆಯ ಹೆಸರುಗಳಿಂದ ಮತ್ತೆ ಗುರುತಿಸಲಾಗುತ್ತಿದೆ. ಈ ದಿಢೀರ್ ಬದಲಾವಣೆ ಹಿಂದೆ ಇರುವ ಉದ್ದೇಶವೇನು ಎಂಬ ಬಗ್ಗೆ ಚರ್ಚೆ ತೀವ್ರವಾಗಿದೆ.
ಮರಿಯಮ್ ನವಾಜ್ ನೇತೃತ್ವದ ಪಂಜಾಬ್ ಸರ್ಕಾರ ಲಾಹೋರ್‌ನ ನಾಮಕರಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ತರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಸ್ಲಾಮಿಕ್ ಹೆಸರುಗಳನ್ನು ತೆಗೆದು ಪುರಾತನ ಹಿಂದೂ, ಸಿಖ್ ಹಾಗೂ ಬ್ರಿಟಿಷ್ ಕಾಲದ ಹೆಸರುಗಳನ್ನು ಮರುಪ್ರವೇಶ ಮಾಡಲಾಗುತ್ತಿದ್ದು, ಇದು ಐತಿಹಾಸಿಕ ಅಸ್ಮಿತೆಯ ಮರುಸ್ಥಾಪನೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.
1990ರ ದಶಕದಲ್ಲಿ ಹಿಂದೂ–ಸಿಖ್ ಗುರುತುಗಳನ್ನು ತೆಗೆದು ಇಸ್ಲಾಂಪುರ ಸೇರಿದಂತೆ ಅನೇಕ ಪ್ರದೇಶಗಳನ್ನು ಮರುನಾಮಕರಣ ಮಾಡಲಾಗಿತ್ತು. ಆದರೆ ಈಗ ಅದೇ ನಗರದಲ್ಲಿ ಮತ್ತೆ ಹಳೆಯ ಹೆಸರುಗಳನ್ನು ಪುನಃ ಬಳಸಲಾಗುತ್ತಿದ್ದು, ಇದು ಐತಿಹಾಸಿಕ ತಿರುವಿನಂತೆ ಕಾಣುತ್ತಿದೆ. ಇಸ್ಲಾಂಪುರದಿಂದ ಕೃಷ್ಣ ನಗರ, ರೆಹಮಾನ್ ಗಲ್ಲಿಯಿಂದ ರಾಮ್ ಗಲ್ಲಿ ಎಂಬ ಬದಲಾವಣೆಗಳು ಚರ್ಚೆಯ ಕೇಂದ್ರವಾಗಿವೆ.
ಸರ್ಕಾರದ ಈ ಕ್ರಮವು ಕೇವಲ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯ ಭಾಗವೋ ಅಥವಾ ರಾಜಕೀಯ ಸಂದೇಶವೋ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಲಾಹೋರ್‌ನ ಹಳೆಯ ಬಹುಸಂಸ್ಕೃತಿಕ ಇತಿಹಾಸವನ್ನು ನೆನಪಿಸಲು ಈ ಹೆಸರು ಬದಲಾವಣೆಗಳನ್ನು ಬಳಸಲಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ, ಮತ್ತೊಂದು ವರ್ಗ ಇದನ್ನು ರಾಜಕೀಯ ತಂತ್ರ ಎಂದು ವಿಶ್ಲೇಷಿಸುತ್ತಿದೆ.
ಲಾಹೋರ್‌ನ ಬೀದಿ ಹೆಸರುಗಳ ಬದಲಾವಣೆ ಕೇವಲ ಹಿಂದೂ ಅಥವಾ ಸಿಖ್ ಹೆಸರುಗಳಿಗೆ ಮಾತ್ರ ಸೀಮಿತವಾಗಿಲ್ಲ, ಬ್ರಿಟಿಷ್ ಕಾಲದ ಹೆಸರುಗಳಿಗೂ ಮರುಪ್ರವೇಶ ನೀಡಲಾಗುತ್ತಿದೆ. ಕ್ವೀನ್ಸ್ ರೋಡ್, ಎಂಪ್ರೆಸ್ ರೋಡ್, ಲಾರೆನ್ಸ್ ರೋಡ್ ಮುಂತಾದ ಹೆಸರುಗಳು ಮತ್ತೆ ಕಾಣಿಸಿಕೊಳ್ಳುತ್ತಿರುವುದು ನಗರ ಪರಂಪರೆಯ ಪುನರ್ ಬರವಣಿಗೆಯಂತೆ ಕಾಣುತ್ತಿದೆ. ಈ ಬೆಳವಣಿಗೆಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.