ಹೈಲೈಟ್ಸ್:
ಕೆನಡಾ ಗಡಿಯ ಮೂಲಕ ಅಮೆರಿಕಾಗೆ ಅಕ್ರಮ ವಲಸಿಗರನ್ನು ಸಾಗಿಸುತ್ತಿದ್ದ ಜಾಲದಲ್ಲಿ ಭಾರತ ಮೂಲದ ಯುವಕನ ಪಾತ್ರ ಬೆಳಕಿಗೆ
US ಪ್ರವೇಶಕ್ಕೆ ಭಾರತೀಯ ವಲಸಿಗರಿಗೆ ನೆರವಾಗಲು ಚಾಲಕರನ್ನು ನೇಮಿಸಿದ್ದ ಆರೋಪಿ, ಪ್ರತಿಯೊಬ್ಬ ವಲಸಿಗನಿಗೆ ತಲಾ $100 ಪಾವತಿ
2025ರಲ್ಲಿ US ಗಡಿ ಗಸ್ತು ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಜಾಲ ಪತ್ತೆ, ಸೆಪ್ಟೆಂಬರ್‌ನಲ್ಲಿ ಶಿಕ್ಷೆ ಪ್ರಕಟ ಸಾಧ್ಯತೆ
ವಾಷಿಂಗ್ಟನ್: ಅಮೆರಿಕಾದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂಬ ಕನಸು ಅನೇಕ ಮಂದಿಯಲ್ಲಿದೆ. ಆದರೆ, US ವೀಸಾ ಪಡೆಯುವುದು ಕಷ್ಟಕರವಾಗಿರುವ ಕಾರಣ ಕೆಲವರು ಅಕ್ರಮ ಮಾರ್ಗಗಳತ್ತ ಮುಖ ಮಾಡುತ್ತಾರೆ. ಇಂತಹ ಅಕ್ರಮ ವಲಸೆ ಜಾಲಗಳಿಗೆ ಮಾನವ ಕಳ್ಳಸಾಗಣೆ ಗುಂಪುಗಳು ಬೆಂಬಲ ನೀಡುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದೀಗ ಇದೇ ರೀತಿಯ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಸಿಲುಕಿದ್ದಾನೆ.
ಭಾರತೀಯ ಮೂಲದ 22 ವರ್ಷದ ಶಿವಂ ಎಂಬಾತ ಕೆನಡಾದಿಂದ ಅಮೆರಿಕಾಗೆ ಜನರನ್ನು ಅಕ್ರಮವಾಗಿ ಸಾಗಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾನೆ ಎಂದು ಅಮೆರಿಕಾದ ನ್ಯಾಯಾಂಗ ಇಲಾಖೆ ತಿಳಿಸಿದೆ. ಅಕ್ಟೋಬರ್ 2024ರಿಂದ ಜೂನ್ 2025ರವರೆಗೆ ಅಮೆರಿಕಾದ ಉತ್ತರ ಗಡಿಭಾಗದಲ್ಲಿ ಮಾನವ ಕಳ್ಳಸಾಗಣೆ ಚಟುವಟಿಕೆಗಳನ್ನು ಸಂಘಟಿಸಿ, ಭಾರತದಿಂದ ಬಂದ ವಲಸಿಗರನ್ನು US-ಕೆನಡಾ ಗಡಿಯ ಮೂಲಕ ನ್ಯೂಯಾರ್ಕ್‌ಗೆ ಅಕ್ರಮವಾಗಿ ಕರೆತಂದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ಮಾನವ ಕಳ್ಳಸಾಗಣೆ ಜಾಲದಲ್ಲಿ ಶಿವಂ ಪ್ರಮುಖ ಪಾತ್ರವಹಿಸಿದ್ದಾನೆ ಎಂದು US ನ್ಯಾಯಾಲಯದ ದಾಖಲೆಗಳು ತಿಳಿಸಿವೆ. ಕೆನಡಾ ಗಡಿಯ ಮೂಲಕ ಅಮೆರಿಕಾಗೆ ನುಸುಳುತ್ತಿದ್ದ ಭಾರತೀಯ ವಲಸಿಗರನ್ನು ಸುರಕ್ಷಿತವಾಗಿ ಸಾಗಿಸಲು ಅಗತ್ಯವಿರುವ ಚಾಲಕರನ್ನು ನೇಮಿಸುವ ಜವಾಬ್ದಾರಿಯನ್ನು ಆತ ವಹಿಸಿಕೊಂಡಿದ್ದನು. ಉತ್ತರ ನ್ಯೂಯಾರ್ಕ್ ಪ್ರದೇಶದ ಮನೆಗಳು ಹಾಗೂ ಪ್ಲಾಟ್ಸ್‌ಬರ್ಗ್‌ನ ಹೋಟೆಲ್‌ಗಳಿಗೆ ವಲಸಿಗರನ್ನು ಕರೆದೊಯ್ಯುವ ವ್ಯವಸ್ಥೆಯನ್ನು ಆತ ಮಾಡುತ್ತಿದ್ದನು ಎನ್ನಲಾಗಿದೆ. ಈ ಕೆಲಸಕ್ಕಾಗಿ ಕಳ್ಳಸಾಗಣೆ ಜಾಲದಿಂದ ಹಣ ಪಡೆದು, ಚಾಲಕರಿಗೂ ಪಾವತಿ ಮಾಡುತ್ತಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇನ್ನು, 2025ರ ಜನವರಿಯಲ್ಲಿ ಭಾರತ ಮತ್ತು ಯುಕೆಗೆ ಸೇರಿದ ಸುಮಾರು 12 ಮಂದಿ ಅಕ್ರಮ ವಲಸಿಗರನ್ನು ಕೆನಡಾ ಗಡಿಯ ಮೂಲಕ ಅಮೆರಿಕಾಗೆ ಸಾಗಿಸಲು ಶಿವಂ ಚಾಲಕರಿಗೆ ಸೂಚನೆ ನೀಡಿದ್ದನು. ಈ ಕಾರ್ಯದಲ್ಲಿ ಭಾಗಿಯಾಗಿದ್ದ ಸಹಚರರಿಗೆ ಪ್ರತಿಯೊಬ್ಬ ವಲಸಿಗನ ಸಾಗಣೆಗೆ ತಲಾ 100 ಡಾಲರ್ ಪಾವತಿಸಿದ್ದನೆಂದು ದಾಖಲೆಗಳು ಹೇಳಿವೆ.
ಇದೇ ಅವಧಿಯಲ್ಲಿ ಅಮೆರಿಕಾದ ವಲಸೆ ಅಧಿಕಾರಿಗಳು ಅಕ್ರಮ ವಲಸಿಗರ ವಿರುದ್ಧ ಕಠಿಣ ಕಾರ್ಯಾಚರಣೆ ಆರಂಭಿಸಿದ್ದರು. ಅದರ ಭಾಗವಾಗಿ US ಗಡಿ ಗಸ್ತು ಅಧಿಕಾರಿಗಳು ಕೆನಡಾ ಗಡಿಯ ಬಳಿ ಸಂಶಯಾಸ್ಪದವಾಗಿ ಚಲಿಸುತ್ತಿದ್ದ ಎರಡು ವಾಹನಗಳನ್ನು ತಡೆಯಲು ಯತ್ನಿಸಿದರು. ಆದರೆ, ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ವಾಹನಗಳು ವೇಗ ಹೆಚ್ಚಿಸಿದ್ದವು. ಇದರಲ್ಲಿ ಒಂದು ವಾಹನ ನಿಯಂತ್ರಣ ತಪ್ಪಿ ಆಫ್‌ರೋಡ್‌ನಲ್ಲಿ ಸಿಲುಕಿಕೊಂಡರೆ, ಮತ್ತೊಂದು ವಾಹನವನ್ನು ನ್ಯೂಯಾರ್ಕ್‌ನ ಮೂರ್ಸ್ ಪ್ರದೇಶದಲ್ಲಿ ಅಧಿಕಾರಿಗಳು ವಶಪಡಿಸಿಕೊಂಡರು. ಈ ವೇಳೆ 12 ಮಂದಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ಅಕ್ರಮ ವಲಸಿಗರ ಕಳ್ಳಸಾಗಣೆ ಸಂಚು ರೂಪಿಸಿದ ಆರೋಪ ಸೇರಿದಂತೆ, ಆರ್ಥಿಕ ಲಾಭಕ್ಕಾಗಿ ವಿದೇಶಿಯರ ಕಳ್ಳಸಾಗಣೆ ಮಾಡಿದ ಮೂರು ಆರೋಪಗಳನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಅವನಿಗೆ ಶಿಕ್ಷೆ ಪ್ರಕಟವಾಗಲಿದೆ. ಪ್ರಕರಣದಲ್ಲಿ ಕನಿಷ್ಠ 5 ವರ್ಷದಿಂದ ಗರಿಷ್ಠ 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದ್ದು, ಫೆಡರಲ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಅಂತಿಮಗೊಳಿಸಲಿದ್ದಾರೆ.