ತಿರುವನಂತಪುರಂ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ರಾಜ್ಯಗಳ ಸಂಸದೀಯ ಸ್ಥಾನಗಳು ಕಡಿಮೆಯಾಗಲಿವೆ ಎಂಬ ಆತಂಕವನ್ನು ತಳ್ಳಿ ಹಾಕಿದ ಪ್ರಧಾನಿ Narendra Modi, ಜನಸಂಖ್ಯೆ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ಈ ರಾಜ್ಯಗಳ ಪ್ರತಿನಿಧಿತ್ವದಲ್ಲಿ ಯಾವುದೇ ಕುಸಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೇರಳದ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ಶನಿವಾರ (ಏ. 04) ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸ್ಥಾನಗಳ ಒಟ್ಟು ಸಂಖ್ಯೆ ಹೆಚ್ಚಳದಿಂದ ಎಲ್ಲ ರಾಜ್ಯಗಳಿಗೂ ಲಾಭವಾಗಲಿದೆ ಎಂದರು. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಹಾಗೂ ಗೋವಾ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದರೂ, ಅವುಗಳ ಲೋಕಸಭಾ ಸ್ಥಾನಗಳು ಕಡಿಮೆಯಾಗುವುದಿಲ್ಲ ಎಂದು ಭರವಸೆ ನೀಡಿದರು. ದಕ್ಷಿಣ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡಲು ಸಂಸತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದ ಅವರು, ಸಂಸತ್ತು ಮತ್ತು ರಾಜ್ಯ ವಿಧಾನಮಂಡಲಗಳಲ್ಲಿ ಸ್ಥಾನಗಳ ಹೆಚ್ಚಳ ಹಾಗೂ ಮಹಿಳೆಯರಿಗೆ 33% ಮೀಸಲಾತಿ ಜಾರಿಗೆ ತರುವ ಉದ್ದೇಶದಿಂದ ಈ ತಿಂಗಳ 16 ರಿಂದ 18ರವರೆಗೆ ವಿಶೇಷ ಅಧಿವೇಶನ ಕರೆದಿರುವುದಾಗಿ ತಿಳಿಸಿದರು. ಪುನರ್ವಿಂಗಡಣೆಯ ಬಳಿಕ ಲೋಕಸಭಾ ಸ್ಥಾನಗಳ ಸಂಖ್ಯೆ 543ರಿಂದ 816ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಕಾಂಗ್ರೆಸ್ ಹಿರಿಯ ನಾಯಕ Jairam Ramesh ದಕ್ಷಿಣ ರಾಜ್ಯಗಳ ಸ್ಥಾನಗಳ ಕಡಿತದ ಬಗ್ಗೆ ವ್ಯಕ್ತಪಡಿಸಿದ್ದ ಆತಂಕವನ್ನು ಮೋದಿ ನಿರಾಕರಿಸಿದರು.