ವಾಷಿಂಗ್ಟನ್: ಕಂಪನಿಗಳ ಅಧಿಕಾರಿಗಳು ಇನ್ಸೈಡರ್ ಟ್ರೇಡಿಂಗ್ ಮಾಡಿ ಸಿಕ್ಕಿಬಿದ್ದ ಪ್ರಕರಣಗಳನ್ನು ನೀವು ಕೇಳಿರಬಹುದು. ಆದರೆ ಈ ಬಾರಿ, “ಮಿಲಿಟರಿ ಇನ್ಸೈಡರ್ ಟ್ರೇಡಿಂಗ್” ನಡೆಸಿದ ಆರೋಪದಲ್ಲಿ ಒಬ್ಬ ಸೈನಿಕ ಬಂಧನಕ್ಕೊಳಗಾಗಿದ್ದಾನೆ.
ವಾಷಿಂಗ್ಟನ್: ಸಾಮಾನ್ಯವಾಗಿ ಇನ್ಸೈಡರ್ ಟ್ರೇಡಿಂಗ್ ಎಂದರೆ ಕಂಪನಿಯ ಒಳಗಿರುವವರು ರಹಸ್ಯ ಮಾಹಿತಿ ಬಳಸಿಕೊಂಡು ಲಾಭ ಪಡೆಯುವುದು. ಆದರೆ ಈಗ ಇದೇ ರೀತಿಯ ಆರೋಪ ಮಿಲಿಟರಿ ವಲಯದಲ್ಲಿ ಕೇಳಿಬಂದಿದೆ.
ಹೌದು. ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನಕ್ಕೆ ಸಂಬಂಧಿಸಿದ ಬೆಟ್ಟಿಂಗ್ ಹಗರಣದಲ್ಲಿ ಅಮೆರಿಕದ ಸೈನಿಕನೊಬ್ಬನನ್ನು ಬಂಧಿಸಲಾಗಿದೆ.
ಅಮೆರಿಕದ ವಿಶೇಷ ಪಡೆಗಳ ಮಾಸ್ಟರ್ ಸರ್ಜೆಂಟ್ ಗ್ಯಾನನ್ ಕೆನ್ ವ್ಯಾನ್ ಡೈಕ್ ಅವರನ್ನು ಏಪ್ರಿಲ್ 23 ರಂದು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಡುರೊ ಬಂಧನಕ್ಕೆ ಸಂಬಂಧಿಸಿದ ‘ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಎಂಬ ಗುಪ್ತ ಸೇನಾ ಕಾರ್ಯಾಚರಣೆಯಲ್ಲಿ ವ್ಯಾನ್ ಡೈಕ್ ಭಾಗಿಯಾಗಿದ್ದನೆಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯ ಒಳಗಿನ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು, ಆತ ಪಾಲಿಮಾರ್ಕೆಟ್ ವೇದಿಕೆಯಲ್ಲಿ ಸುಮಾರು 27 ಲಕ್ಷ ರೂ. (33,000 ಡಾಲರ್) ಬೆಟ್ಟಿಂಗ್ ಮಾಡಿದನೆಂದು ಆರೋಪಿಸಲಾಗಿದೆ.
ಜನವರಿ 3ರಂದು ಮಡುರೊ ಬಂಧನವಾದ ನಂತರ, ಈ ಬೆಟ್ಟಿಂಗ್ ಮೂಲಕ ವ್ಯಾನ್ ಡೈಕ್ 3.4 ಕೋಟಿ ರೂ.ಗೂ ಹೆಚ್ಚು (4.09 ಲಕ್ಷ ಡಾಲರ್) ಲಾಭ ಗಳಿಸಿದ್ದಾನೆ ಎಂದು ಹೇಳಲಾಗಿದೆ.
ರಹಸ್ಯ ಮಾಹಿತಿಯನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವ ಕಾರಣ, ಅಮೆರಿಕದ ನ್ಯಾಯ ಇಲಾಖೆ ಆತನ ವಿರುದ್ಧ ವಂಚನೆ ಹಾಗೂ ಕಳ್ಳತನದ ಪ್ರಕರಣ ದಾಖಲಿಸಿದೆ.
ಸಾಮಾನ್ಯವಾಗಿ ಇನ್ಸೈಡರ್ ಟ್ರೇಡಿಂಗ್ ಅನ್ನು ಶೇರು ಮಾರುಕಟ್ಟೆಯಲ್ಲಿ ಕಾಣಬಹುದು. ಆದರೆ ಇಲ್ಲಿ ನಡೆದಿದ್ದು ಮಿಲಿಟರಿ ಮಾಹಿತಿಯ ಆಧಾರದ ಮೇಲೆ ನಡೆದ ಬೆಟ್ಟಿಂಗ್ ಹಗರಣ.
ವರದಿಗಳ ಪ್ರಕಾರ, ವ್ಯಾನ್ ಡೈಕ್‌ಗೆ ಕಾರ್ಯಾಚರಣೆಯ ನಿಖರ ದಿನಾಂಕ ಮತ್ತು ಸಮಯ ಮೊದಲೇ ತಿಳಿದಿತ್ತು. ಈ ಮಾಹಿತಿಯ ಆಧಾರದಲ್ಲಿ ಆತ ಮಡುರೊ 2026ರ ಜನವರಿಯೊಳಗೆ ಬಂಧನಗೊಳ್ಳುತ್ತಾರೆ ಎಂದು ಬೆಟ್ಟಿಂಗ್ ಹಾಕಿದ್ದ.
ಯಾವುದೇ ಅನುಮಾನ ಬರದಂತೆ ಆತ ಕ್ರಿಪ್ಟೋಕರೆನ್ಸಿ ಬಳಸಿ ಈ ವ್ಯವಹಾರಗಳನ್ನು ನಡೆಸಿದ್ದಾನೆ ಎನ್ನಲಾಗಿದೆ.
ತನಿಖೆ ಆರಂಭವಾಗಿದ್ದು ಹೇಗೆ?
ಪಾಲಿಮಾರ್ಕೆಟ್ ಒಂದು ಬ್ಲಾಕ್‌ಚೈನ್ ಆಧಾರಿತ ಪಾರದರ್ಶಕ ಬೆಟ್ಟಿಂಗ್ ವೇದಿಕೆ. ಮಡುರೊ ಬಂಧನದ ನಂತರ ಕೆಲವು ಖಾತೆಗಳಿಗೆ ಅಸಾಧಾರಣ ಲಾಭ ಬಂದಿರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ.
ಈ ಅಸಾಮಾನ್ಯ ಲಾಭದ ಮೂಲವನ್ನು ಪರಿಶೀಲಿಸಿದಾಗ, ಹಣದ ಹಾದಿ ಒಂದು ಅಮೆರಿಕದ ಸೈನಿಕನತ್ತ ಹೋಗಿರುವುದು ಪತ್ತೆಯಾಗಿದೆ.
ಅದನ್ನು ಮುಂದುವರೆಸಿ ಎಫ್‌ಬಿಐ ಹಾಗೂ ಸೈಬರ್ ತನಿಖಾ ತಂಡಗಳು ಖಾತೆಗಳ ಚಟುವಟಿಕೆಗಳನ್ನು ಪರಿಶೀಲಿಸಿದಾಗ, ಅದು ವ್ಯಾನ್ ಡೈಕ್‌ಗೆ ಸಂಪರ್ಕ ಹೊಂದಿರುವುದು ಬಹಿರಂಗವಾಗಿದೆ.