ಮಾಲಿಯ ರಕ್ಷಣಾ ಸಚಿವ ಜನರಲ್ ಸಾಡಿಯೋ ಕಾಮಾರಾ ದೇಶದ ವಿವಿಧ ಸೈನಿಕ ತಾಣಗಳನ್ನು ಗುರಿಯಾಗಿಸಿಕೊಂಡು ನಡೆದ ಸಂಯೋಜಿತ ದಾಳಿಗಳ ಸರಣಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ವಕ್ತಾರ ಇಸ್ಸಾ ಉಸ್ಮಾನೆ ಕೂಲಿಬಾಲಿ ನೀಡಿದ ಹೇಳಿಕೆಯಲ್ಲಿ, ದಾಳಿಕೋರರು ಕಾಮಾರಾ ಅವರ ಕಾಟಿಯಲ್ಲಿರುವ ನಿವಾಸವನ್ನು ನೇರವಾಗಿ ಗುರಿಯಾಗಿಸಿಕೊಂಡಿದ್ದರು. ಗ್ಯಾರಿಸನ್ ಪಟ್ಟಣವಾದ ಕಾಟಿಯಲ್ಲಿ ಅಲ್‌ಖೈದಾ ಸಂಪರ್ಕಿತ ಗುಂಪು ಮತ್ತು ಟುವಾರೆಗ್ ಬಂಡುಕೋರರು ಒಂದೇ ವೇಳೆ ದಾಳಿ ನಡೆಸಿದ್ದಾರೆ. 2020 ಮತ್ತು 2021ರ ಸೇನಾ ತಿರುಗಿಬಿದ್ದ ಬಳಿಕ ಅಧಿಕಾರಕ್ಕೆ ಬಂದ ಸೈನಿಕ ಆಡಳಿತದಲ್ಲಿ ಕಾಮಾರಾ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸೈನಿಕ ನಾಯಕತ್ವದ ಪ್ರಮುಖ ಮತ್ತು ಪ್ರಭಾವಿ ಮುಖವಾಗಿದ್ದು, ಭವಿಷ್ಯದ ನಾಯಕರಾಗಿ ಪರಿಗಣಿಸಲ್ಪಟ್ಟಿದ್ದರು. ಈ ದಾಳಿ ಮಾಲಿಯ ಸಶಸ್ತ್ರ ಪಡೆಗಳಿಗೆ ಭಾರೀ ಹೊಡೆತ ನೀಡಿದೆ. ವರದಿಗಳ ಪ್ರಕಾರ, ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಕಾಮಾರಾ ಸಾವನ್ನಪ್ಪಿದ್ದಾರೆ. ಕಾಟಿ ರಾಜಧಾನಿ ಬಮಾಕೋದಿಂದ ಸುಮಾರು 15 ಕಿಮೀ ದೂರದಲ್ಲಿರುವ ಭದ್ರತಾ ದೃಷ್ಟಿಯಿಂದ ಅತ್ಯಂತ ಪ್ರಮುಖ ಪ್ರದೇಶವಾಗಿದ್ದು, ಮಧ್ಯಂತರ ಅಧ್ಯಕ್ಷ ಅಸ್ಸಿಮಿ ಗೋಯಿಟಾ ಕೂಡ ಅಲ್ಲೇ ವಾಸಿಸುತ್ತಾರೆ. AFP ವರದಿಯ ಪ್ರಕಾರ, ಕಾಮಾರಾ ಅವರ ಎರಡನೇ ಪತ್ನಿ ಮತ್ತು ಇಬ್ಬರು ಮೊಮ್ಮಕ್ಕಳು ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅತ್ಯಂತ ಭದ್ರಿತ ಪ್ರದೇಶವಾಗಿದ್ದರೂ JNIM ಮತ್ತು FLA ಟುವಾರೆಗ್ ಯೋಧರು ದಾಳಿ ನಡೆಸಲು ಯಶಸ್ವಿಯಾಗಿದ್ದಾರೆ ಎಂದು ಅಲ್ ಜಝೀರಾ ಪತ್ರಕರ್ತ ನಿಕೋಲಸ್ ಹಕ್ ತಿಳಿಸಿದ್ದಾರೆ.