ಬೆಂಗಳೂರು : ಪಾಂಡವಪುರ ತಾಲ್ಲೂಕಿನ ಆರತಿ ಉಕ್ಕಡದ ಮಾರಮ್ಮ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸವಿತಾ ಎಂಬುವರ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ದೇವಸ್ಥಾನದಲ್ಲಿ ವಿಶೇಷ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಸವಿತಾ ಹಾಗೂ ಐಶ್ವರ್ಯ ಅವರ ನಡುವೆ ಮಾತಿನ ಚಕಮಕಿ ನಡೆದು ಮಹಿಳಾ ಪಿಎಸ್‌ಐ ಮೇಲೆ ಕೈಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತುಈ ಘಟನೆಗೆ ತೀವ್ರ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಘಟನೆ ಕುರಿತು ಮಾಧ್ಯಮಗಳ ಮುಂದೆ ಸೌಜನ್ಯವಾಗಿ ಮಾತನಾಡಿದ್ದ ಶಾಸಕ ಸುರೇಶ್‌ಗೌಡ ಅವರೂ ಸಹ ಪೊಲೀಸ್ ಇಲಾಖೆ ಮತ್ತು ರಾಜ್ಯದ ಜನತೆಯಲ್ಲಿ ಕ್ಷಮೆ ಕೋರಿ, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದಿದ್ದರು.
ಈಗ ಶಾಸಕ ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಅವರೂ ಕೂಡ ವಿಡಿಯೋ ಮುಖಾಂತರ ತಮ್ಮ ನಡವಳಿಕೆಯಿಂದ ಪೋಲಿಸ್ ಅಧಿಕಾರಿ ಸವಿತಾ ಹಾಗೂ ಸಾರ್ವಜನಿಕರಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ವಿನಂತಿಸಿದ್ದಾರೆ.