ಟೆಲ್ ಅವೀವ್: ಇರಾನ್ ಮೂಲದ ಡ್ರೋನ್‌ಗಳನ್ನು (Iranian Drones) ಹೊಡೆದುರುಳಿಸಬಲ್ಲ ‘ಐರನ್ ಬೀಮ್’ (Iron Beam) ಲೇಸರ್ ಶಸ್ತ್ರವನ್ನು ಇಸ್ರೇಲ್ (Israel) ಯುಎಇಗೆ ರವಾನಿಸಿದೆ.
ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲೇ, ಇಸ್ರೇಲ್ ತನ್ನ ಪ್ರಸಿದ್ಧ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಗೆ ಕಳುಹಿಸಿದೆ. ಜೊತೆಗೆ, ಇರಾನಿನ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳಿಂದ ರಕ್ಷಣೆ ಪಡೆಯಲು ಸುಧಾರಿತ ಲೇಸರ್ ತಂತ್ರಜ್ಞಾನವನ್ನೂ ಒದಗಿಸಿದೆ. ಈ ಹೊಸ ಲೇಸರ್ ನಿಯೋಜನೆ, ಇಸ್ರೇಲ್–ಯುಎಇ ನಡುವಿನ ಮಹತ್ವದ ರಕ್ಷಣಾ ಸಹಕಾರದ ಮೊದಲ ಉದಾಹರಣೆಗಳಲ್ಲಿ ಒಂದಾಗಿದೆ. 2020ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಅಬ್ರಹಾಂ ಒಪ್ಪಂದಗಳ ಮೊದಲು, ಈ ಎರಡೂ ದೇಶಗಳಿಗೆ ರಾಜತಾಂತ್ರಿಕ ಸಂಬಂಧಗಳೇ ಇರಲಿಲ್ಲ. ಶಹೆದ್ ಡ್ರೋನ್‌ಗಳ ಬೆದರಿಕೆಯನ್ನು ಎದುರಿಸಲು ‘ಸ್ಪೆಕ್ಟ್ರೋ’ ಎಂಬ ಸುಧಾರಿತ ನಿಗಾವಳಿ ವ್ಯವಸ್ಥೆಯನ್ನೂ ಇಸ್ರೇಲ್ ಯುಎಇಗೆ ಕಳುಹಿಸಿದೆ. ಯುಎಇಗೆ ರವಾನಿಸಿದ ದಾಳಿ ಮತ್ತು ರಕ್ಷಣಾ ವ್ಯವಸ್ಥೆಗಳ ಬಹುಪಾಲು ಇನ್ನೂ ಮೂಲಮಾದರಿ ಹಂತದಲ್ಲಿವೆ. ಟೆಲ್ ಅವೀವ್ ತನ್ನ ಐರನ್ ಬೀಮ್ ಲೇಸರ್ ರಕ್ಷಣಾ ವ್ಯವಸ್ಥೆಯ ಒಂದು ಆವೃತ್ತಿಯನ್ನು ಯುಎಇಗೆ ನೀಡಿದ್ದು, ಇದು ಅಲ್ಪ ದೂರದ ರಾಕೆಟ್‌ಗಳು ಹಾಗೂ ಡ್ರೋನ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಈ ವ್ಯವಸ್ಥೆಯನ್ನು ಇಸ್ರೇಲ್ ಮೊದಲು ಲೆಬನಾನ್‌ನಿಂದ ಬಂದ ಹೆಜ್ಬೊಲ್ಲಾ ದಾಳಿಗಳ ವಿರುದ್ಧ ಬಳಸಿತ್ತು.