ವಾಷಿಂಗ್ಟನ್: ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೆ ಅಮೆರಿಕ ಇರಾನ್ ಬಂದರುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ದಿಗ್ಬಂಧನವು ಇರಾನ್ ಆರ್ಥಿಕತೆಯನ್ನು ಗಂಭೀರವಾಗಿ ಹಾನಿಗೊಳಿಸುತ್ತಿದ್ದು, ಒಪ್ಪಂದ ಅಂತಿಮವಾಗುವ ತನಕ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಇರಾನ್ ದಿನಕ್ಕೆ ಸುಮಾರು $500 ಮಿಲಿಯನ್ ನಷ್ಟ ಅನುಭವಿಸುತ್ತಿದ್ದು, ಈ ಪರಿಸ್ಥಿತಿ ದೀರ್ಘಾವಧಿಗೆ ತಾಳಲಾಗದಂತಿದೆ ಎಂದು ಅವರು ಹೇಳಿದ್ದಾರೆ. ಇತ್ತ ಅಮೆರಿಕ ಮತ್ತು ಇರಾನ್ ಪರಸ್ಪರ ವಿಧಿಸಿರುವ ದಿಗ್ಬಂಧನಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೂ ಮತ್ತೆ ಅಡಚಣೆ ಉಂಟಾಗಿದೆ.
ಮತ್ತೊಂದೆಡೆ, ಟ್ರಂಪ್ ಅವರ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ಇರಾನ್‌ನಲ್ಲಿ ಅಮೆರಿಕ ಸರ್ಕಾರದ ಬಗ್ಗೆ ಗಂಭೀರ ಅಪನಂಬಿಕೆ ಇದೆ ಮತ್ತು ಇರಾನಿಯ ಜನತೆ ಬಲವಂತಕ್ಕೆ ಎಂದಿಗೂ ಮಣಿಯುವುದಿಲ್ಲ ಎಂದು ಹೇಳಿದ್ದಾರೆ. “ಬದ್ಧತೆಗಳನ್ನು ಗೌರವಿಸುವುದೇ ಅರ್ಥಪೂರ್ಣ ಸಂವಾದದ ಮೂಲ,” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಅಮೆರಿಕದ ನಡವಳಿಕೆಯ ಬಗ್ಗೆ ಇರಾನ್‌ನಲ್ಲಿ ಅಪನಂಬಿಕೆ ಮುಂದುವರಿದಿದ್ದು, ಅಮೆರಿಕವು ಶರಣಾಗತಿಯನ್ನು ಬಯಸುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಅಮೆರಿಕದ ನಿಯೋಗ ಪಾಕಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲೇ, ಅಮೆರಿಕದೊಂದಿಗೆ ನಡೆಯಬಹುದಾದ ಹೊಸ ಸುತ್ತಿನ ಶಾಂತಿ ಮಾತುಕತೆಗೆ ಹಾಜರಾಗಬೇಕೆ ಅಥವಾ ಬೇಡವೇ ಎಂಬುದನ್ನು ಇರಾನ್ ಇನ್ನೂ ಅಂತಿಮಗೊಳಿಸಿಲ್ಲ ಎಂದು ವರದಿಯಾಗಿದೆ.