- ವಿಜಯ್ ಶಂಕರ್, ಕೊರಟಗೆರೆ
ಕೊರಟಗೆರೆ: ತಾಲ್ಲೂಕಿನಲ್ಲಿ ಪಹಣಿ ಪವತಿ ಖಾತೆ ಆಂದೋಲನಕ್ಕೆ ತಹಸೀಲ್ದಾರ್ ಮಂಜುನಾಥ್ ಕೆ ಅವರು ವೇಗ ನೀಡಿದ್ದು, ಖುದ್ದು ತಾವೇ ಹಳ್ಳಿಗಳಿಗೆ ಭೇಟಿ ನೀಡಿ ರೈತರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ತಾಲ್ಲೂಕಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಪಹಣಿ ಪವತಿ ಖಾತೆ ಆಂದೋಲನ ಪ್ರಗತಿಯಲ್ಲಿದ್ದು, ತಹಸೀಲ್ದಾರ್ ಮಂಜುನಾಥ್ ಕೆ. ಅವರು ಕೇವಲ ಕಚೇರಿಗೆ ಸೀಮಿತವಾಗದೆ, ನೇರವಾಗಿ ರೈತರ ಮನೆ ಬಾಗಿಲಿಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಪಹಣಿ ಇದ್ದರೆ ಸವಲತ್ತು ಸುಲಭ:
ರೈತರು ತಮ್ಮ ಜಮೀನಿನ ಪಹಣಿ ಮತ್ತು ಪವತಿ ಖಾತೆಯನ್ನು ತಿದ್ದುಪಡಿ ಮಾಡಿಸಿಕೊಂಡರೆ ಪಿಎಂ ಕಿಸಾನ್ ಸಮ್ಮಾನ್, ಬೆಳೆ ವಿಮೆ, ರಸಗೊಬ್ಬರ ಸಬ್ಸಿಡಿ, ಬೆಳೆ ಸಾಲ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಹುಲಿಕುಂಟೆ ಗ್ರಾಮಕ್ಕೆ ಭೇಟಿ, ರೈತರ ಸಮಸ್ಯೆ ಆಲಿಕೆ:
ಇಂದು ಹುಲಿಕುಂಟೆ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಂಜುನಾಥ್ ಕೆ ಅವರು, ಗ್ರಾಮಸ್ಥರ ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಮಾತನಾಡಿದ ಅವರು, "ಎಲ್ಲರೂ ಕಡ್ಡಾಯವಾಗಿ , ಪಡಿತರ ಚೀಟಿ ಇ-ಕೆವೈಸಿ ಮತ್ತು ಪಿಎಂ ಕಿಸಾನ್ ಇ-ಕೆವೈಸಿ ಮಾಡಿಸಿಕೊಳ್ಳಿ. ಇದರಿಂದ ಪಡಿತರ ಮತ್ತು ಕಿಸಾನ್ ಹಣ ನಿಲ್ಲುವುದಿಲ್ಲ. ಯಾರಿಗೆ ವೃದ್ಧಾಪ್ಯ ವೇತನ ಬರುತ್ತಿಲ್ಲವೋ ಅಂತಹವರು ನಮ್ಮ ಗಮನಕ್ಕೆ ತನ್ನಿ, ಕೂಡಲೇ ವೇತನ ಬರುವಂತೆ ಮಾಡಿಕೊಡುತ್ತೇವೆ" ಎಂದು ಭರವಸೆ ನೀಡಿದರು.

ವೃದ್ಧೆಗೆ ತಕ್ಷಣ ಸ್ಪಂದನೆ:
ಗ್ರಾಮದ ಭೇಟಿ ವೇಳೆ ಓರ್ವ ವೃದ್ಧೆ "ನನ್ನ ಆಧಾರ್ ಕಾರ್ಡ್ ನವೀಕರಣ ಆಗುತ್ತಿಲ್ಲ, ಕಣ್ಣು ಮತ್ತು ಬೆರಳಚ್ಚು ಬರುತ್ತಿಲ್ಲ. ಇದರಿಂದ ನನ್ನ ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಆಗುತ್ತಿಲ್ಲ" ಎಂದು ಅಳಲು ತೋಡಿಕೊಂಡರು. ತಕ್ಷಣ ಸ್ಪಂದಿಸಿದ ತಹಸೀಲ್ದಾರರು ಸ್ಥಳದಲ್ಲಿದ್ದ ಸಿಬ್ಬಂದಿಗೆ ವೃದ್ಧೆಯ ಸಮಸ್ಯೆ ಬಗೆಹರಿಸಿ, ಪಡಿತರ ದೊರೆಯುವಂತೆ ಮಾಡಲು ಸೂಚಿಸಿದರು.
ಹವಾ ನಿಯಂತ್ರಿತ ಕೊಠಡಿಯ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಈ ಕಾಲದಲ್ಲಿ ತಹಸೀಲ್ದಾರ್ ರವರು ಹಳ್ಳಿಗಳಿಗೆ ಸ್ವತಃ ತಾವೇ ತೆರಳಿ ಜನಪರ ಕಾಳಜಿಯಿಂದ ಕೆಲಸ ಮಾಡುತ್ತಿರುವುದು ರೈತರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸವರಾಜು, ರಾಘು ಗೌಡ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.