- ಸತ್ಯ ಲೋಕೇಶ್, ಪಾವಗಡ
ಪಾವಗಡ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತೆಂಗಿನಗರಿ ಹಾಗೂ ಮೇಲ್ಚಾವಣಿ ಶೀಟ್‌ನ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ದವಸ ಧಾನ್ಯ, ಹಣ, ದಾಖಲೆ ಪತ್ರಗಳು ಸೇರಿದಂತೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು ನಾಶವಾಗಿರುವ ಘಟನೆ ಸೋಮವಾರ ಮಧ್ಯಾಹ್ನ ತಾಲ್ಲೂಕಿನ ದವಡಬೆಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಚಿಕ್ಕಣ್ಣ (80) ಅವರ ಗುಡಿಸಲಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಚಿಕ್ಕಣ್ಣ ಅವರು ಒಂಟಿಯಾಗಿ ವಾಸವಾಗಿದ್ದು, ಜೀವನೋಪಾಯಕ್ಕಾಗಿ ಸುಮಾರು 10 ಮೇಕೆಗಳನ್ನು ಸಾಕಿಕೊಂಡಿದ್ದರು. ಅವರ ಮಕ್ಕಳು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ತೆರಳಿದ್ದಾರೆ.
ಸೋಮವಾರ ಬೆಳಿಗ್ಗೆ ಮೇಕೆಗಳನ್ನು ಮೇಯಿಸಲು ತೆರಳಿದ್ದ ಚಿಕ್ಕಣ್ಣ ಅವರು ಮಧ್ಯಾಹ್ನ ಮನೆಗೆ ಹಿಂದಿರುಗುವಷ್ಟರಲ್ಲಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿಯಿಂದ ಮನೆಯಲ್ಲಿದ್ದ ಹಣ, ದವಸ ಧಾನ್ಯ, ಆಧಾರ್ ಸೇರಿದಂತೆ ಪ್ರಮುಖ ದಾಖಲೆಗಳು, ಜಮೀನಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸುಟ್ಟು ನಾಶವಾಗಿವೆ. ಘಟನೆಯಲ್ಲಿ ಎರಡು ಮೇಕೆಗಳು ಸುಟ್ಟು ಮೃತಪಟ್ಟಿವೆ. ನಾನು ಒಬ್ಬನೇ ವಾಸವಾಗಿದ್ದೇನೆ. ಬೆಂಕಿ ಬಿದ್ದು ಮನೆಯಲ್ಲಿದ್ದ ಎಲ್ಲವೂ ನಾಶವಾಗಿದೆ. ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದು ಚಿಕ್ಕಣ್ಣ ನೊಂದಿದ್ದಾರೆ.
ಸ್ಥಳೀಯ ಮುಖಂಡ ತಿಮ್ಮಣ್ಣ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರದಿಂದ ದೊರೆಯುವ ಪರಿಹಾರ ಹಾಗೂ ಅಗತ್ಯ ನೆರವು ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಆರ್‌ಐ ಸುದರ್ಶನ್ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿ ಗೌತಮಿ ಮತ್ತು ಸಿಬ್ಬಂದಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಕೃಷ್ಣನಾಯಕ, ಹನುಮಂತ್ರಾಯ, ನಿಂಗಪ್ಪ, ಗಂಗಮ್ಮ, ಸುಶೀಲಮ್ಮ, ಲಕ್ಷ್ಮೀದೇವಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.