- ವಿಜಯ್ ಶಂಕರ್ ಕೊರಟಗೆರೆ
ಕೊರಟಗೆರೆ: ಹೋಬಳಿ ಕೇಂದ್ರ ಹೊಳವನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ಅಂಬುಲೆನ್ಸ್ ಸೇವೆ ಇಲ್ಲದೆ ಗಡಿಭಾಗದ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಗ್ರಾಮಗಳಿದ್ದು, ಹೋಬಳಿ ಕೇಂದ್ರದಲ್ಲಿ ಪಿಎಚ್‌ಸಿ ಇದ್ದರೂ ತುರ್ತುವಾಹನದ ವ್ಯವಸ್ಥೆ ಇಲ್ಲದಂತಾಗಿದೆ. ತುರ್ತು ಚಿಕಿತ್ಸೆ ಬೇಕಾದರೆ ಕೊರಟಗೆರೆಯಿಂದ ಅಂಬುಲೆನ್ಸ್ ಬರಬೇಕಿದ್ದು, ಗಡಿಭಾಗದ *ಅರಸಾಪುರ, ಬೈರೇನಹಳ್ಳಿ ಮತ್ತು ದೊಡ್ಡಬಳ್ಳಾಪುರ ಗಡಿಯ ಅಕ್ಕಾಜಹಳ್ಳಿ, ದೊಡ್ಡಸಾಗ್ಗೇರೆ* ಗ್ರಾಮಗಳಿಗೆ 25 ರಿಂದ 30 ಕಿ.ಮೀ ಕ್ರಮಿಸಬೇಕಾಗುತ್ತದೆ. ಇದರಿಂದ ಒಂದು ಗಂಟೆಗೂ ಹೆಚ್ಚು ಸಮಯ ವ್ಯರ್ಥವಾಗುತ್ತಿದ್ದು, ರೋಗಿಗಳಿಗೆ ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ಸಿಗದಂತಾಗಿದೆ. ಹೊಳವನಹಳ್ಳಿಯಲ್ಲೇ ಅಂಬುಲೆನ್ಸ್ ಇದ್ದರೆ ಕೇವಲ 10-15 ಕಿ.ಮೀ ನಲ್ಲಿ ಸೇವೆ ಸಿಗುತ್ತದೆ.
ಹೋರಾಟದ ಫಲವಾಗಿದ್ದ ಸೇವೆ ಕೆಲವೇ ದಿನಕ್ಕೆ ಮಾಯ
ಈ ಸಮಸ್ಯೆ ಬಗ್ಗೆ ಈ ಹಿಂದೆ *ವಿಶ್ವ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸಿದ್ದಲಿಂಗೆಗೌಡ .* ಅವರು ಹೊಳವನಹಳ್ಳಿ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್ ಒದಗಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಸಾರ್ವಜನಿಕರ ಹೋರಾಟಕ್ಕೆ ಮಣಿದ ಇಲಾಖೆ ತಾತ್ಕಾಲಿಕವಾಗಿ ಅಂಬುಲೆನ್ಸ್ ಸೇವೆ ಒದಗಿಸಿತ್ತು. ಆದರೆ ಆ ಸೇವೆ ಹೆಚ್ಚು ದಿನ ಉಳಿಯಲಿಲ್ಲ, ಕೆಲವೇ ದಿನಗಳಲ್ಲಿ ವಾಹನವನ್ನು ವಾಪಸ್ ಪಡೆಯಲಾಗಿದ್ದು, ಈಗ ಮತ್ತೆ ಆಸ್ಪತ್ರೆ ಅಂಬುಲೆನ್ಸ್ ಇಲ್ಲದೆ ಬರಿದಾಗಿದೆ.
ಬಾಣಂತಿಯರು, ವೃದ್ಧರು, ಅಪಘಾತ ಸಂತ್ರಸ್ತರು ತುರ್ತು ಸಂದರ್ಭದಲ್ಲಿ ಖಾಸಗಿ ವಾಹನಗಳನ್ನೇ ಅವಲಂಬಿಸುವಂತಾಗಿದೆ. ಬಡ ಜನರು ಹೆಚ್ಚಿರುವ ಈ ಭಾಗದಲ್ಲಿ ಹಣ ಕೊಟ್ಟು ಖಾಸಗಿ ಅಂಬುಲೆನ್ಸ್ ಮಾಡಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡಲೇ ಎಚ್ಚೆತ್ತು, ಹೊಳವನಹಳ್ಳಿ ಪಿಎಚ್‌ಸಿಗೆ ಶಾಶ್ವತವಾಗಿ 108 ಅಂಬುಲೆನ್ಸ್ ಸೇವೆ ಕಲ್ಪಿಸಬೇಕು ಎಂದು ಹೋಬಳಿಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.