ಪುಲ್ವಾಮಾ: ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರನ ಅಂತ್ಯವಾಗಿದೆ. 2019 ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ಆತ್ಮಾಹುತಿ ಉಗ್ರ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಘಟನೆಯ ಹಿಂದಿನ ಪ್ರಮುಖ ಸೂತ್ರಧಾರನಾಗಿದ್ದ ಹಮ್ಜಾ ಬುರ್ಹಾನ್ ಅನ್ನು ಅಪರಿಚಿತ ಗನ್‌ಮ್ಯಾನ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
‘ಡಾಕ್ಟರ್’ ಎಂದು ಪರಿಚಿತನಾಗಿದ್ದ ಪುಲ್ವಾಮಾ ಮೂಲದ ಹಮ್ಜಾ ಬುರ್ಹಾನ್ ಅನ್ನು 2022ರಲ್ಲಿ ಕೇಂದ್ರ ಗೃಹ ಸಚಿವಾಲಯ ಅಧಿಕೃತವಾಗಿ ಭಯೋತ್ಪಾದಕ ಎಂದು ಘೋಷಿಸಿತ್ತು.
ಬುರ್ಹಾನ್‌ನ ನಿಜ ಹೆಸರು ಅರ್ಜುಮಂದ್ ಗುಲ್ಜಾರ್ ದಾರ್ ಎಂದು ತಿಳಿದುಬಂದಿದೆ. ಮುಜಫರಾಬಾದ್‌ನಲ್ಲಿ ನಡೆದ ದಾಳಿಯಲ್ಲಿ ಅಪರಿಚಿತ ದಾಳಿಕೋರರಿಂದ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಅವನು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಲವಾರು ಉಗ್ರರ ಹತ್ಯೆಗಳು ನಡೆದಿವೆ ಎಂಬುದೂ ಗಮನಾರ್ಹವಾಗಿದೆ.
ಹಮ್ಜಾ ಬುರ್ಹಾನ್ ಯಾರು?
ಪುಲ್ವಾಮಾ ಜಿಲ್ಲೆಯ ರತ್ನಿಪೋರಾ ಪ್ರದೇಶದ ಖಾರ್ಬತ್ಪೋರಾದಲ್ಲಿ ಜನಿಸಿದ ಬುರ್ಹಾನ್, 2017ರಲ್ಲಿ ಉನ್ನತ ಶಿಕ್ಷಣದ ಹೆಸರಿನಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ ಅಲ್ಲಿ ನಿಷೇಧಿತ ಉಗ್ರ ಸಂಘಟನೆ ಅಲ್-ಬದರ್‌ಗೆ ಸೇರಿಕೊಂಡು, ಅತಿ ಕಡಿಮೆ ಅವಧಿಯಲ್ಲೇ ಕಮಾಂಡರ್ ಹುದ್ದೆಗೆ ಏರಿದ್ದ ಎಂದು ಹೇಳಲಾಗಿದೆ.
ನಂತರ ಆತ ಕಾಶ್ಮೀರಕ್ಕೆ ಮರಳಿ ಯುವಕರನ್ನು ಧಾರ್ಮಿಕ ಉಗ್ರವಾದದ ಕಡೆಗೆ ಸೆಳೆಯುವ ಮತ್ತು ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಆರೋಪವೂ ಇದೆ.
ದಕ್ಷಿಣ ಕಾಶ್ಮೀರದಲ್ಲಿ ಬುರ್ಹಾನ್ ತನ್ನ ಜಾಲವನ್ನು ಪುಲ್ವಾಮಾದಿಂದ ಶೋಪಿಯಾನ್ ವರೆಗೆ ವಿಸ್ತರಿಸಿದ್ದ ಎಂದು ತಿಳಿದುಬಂದಿದೆ. ಫೆಬ್ರವರಿ 14, 2019ರಂದು ನಡೆದ ಪುಲ್ವಾಮಾ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅವನಿಗೆ ಸಂಬಂಧವಿತ್ತು ಎಂದು ವರದಿಗಳು ಸೂಚಿಸುತ್ತವೆ.