ಬೆಂಗಳೂರು: ಪಾರಿವಾಳದ ವಿಚಾರಕ್ಕೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಾರಿವಾಳ ವಿಚಾರಕ್ಕೆ ಎರಡು ಯುವಕರ ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಲಗ್ಗೆರೆ ನಿವಾಸಿ ಮಲ್ಲಿಕಾರ್ಜುನ್(24) ಕೊಲೆಯಾದ ಯುವಕ. ಕಾಲೋನಿಯಲ್ಲಿ ಸಾಕಿದ್ದ ಪಾರಿವಾಳದ ಸಂಬಂಧ ಮಂಗಳವಾರ ರಾತ್ರಿ ವಿಜ್ಞಾನ ಪಬ್ಲಿಕ್ ಶಾಲೆಯ ಸಮೀಪ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದಿದ್ದು, ವಿಕೋಪಕ್ಕೆ ತಿರುಗಿದೆ.
ಈ ವೇಳೆ ಕಿಡಿಗೇಡಿಗಳು ಮಲ್ಲಿಕಾರ್ಜುನನ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಮಲ್ಲಿಕಾರ್ಜುನನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರ್ಯ, ದರ್ಶನ್, ಮಹೇಂದ್ರ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.