ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ (KIMS) ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ (D Sudhakar) ಅವರನ್ನು ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ಅವರು ಸಚಿವರ ಕುಟುಂಬ ಸದಸ್ಯರ ಜೊತೆಗೆ ಮಾತುಕತೆ ನಡೆಸಿದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಸಚಿವರಿಗೆ ಇನ್ನೂ ಪ್ರಜ್ಞೆ ಮರಳಿಲ್ಲ ಎಂದು ತಿಳಿಸಿದ್ದಾರೆ. ಶ್ವಾಸಕೋಶ ಟ್ರಾನ್ಸ್‌ಪ್ಲಾಂಟ್ ಮಾಡುವ ಮೊದಲು ಮೆದುಳು ಪ್ರಜ್ಞಾವಸ್ಥೆಯಲ್ಲಿ ಇರಬೇಕು ಎಂಬುದನ್ನು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ನಾಳೆ ವೈದ್ಯಕೀಯ ತಂಡ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಸಚಿವ ಸುಧಾಕರ್ ಅವರ ಕುಟುಂಬದವರೊಂದಿಗೆ ಮಾತನಾಡಿರುವುದಾಗಿ ಸಿಎಂ ಹೇಳಿದರು. ಸಚಿವರು ಪ್ರಸ್ತುತ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ ಅವರು, ವೆಂಟಿಲೇಟರ್‌ನಲ್ಲಿ ಇತರ ಅಂಗಾಂಗಗಳು ಸ್ಥಿರವಾಗಿವೆ, ಆದರೆ ಮೆದುಳಿಗೆ ಸಂಬಂಧಿಸಿದ ಪ್ರಜ್ಞೆ ಇನ್ನೂ ಮರಳಿಲ್ಲ ಎಂದು ಹೇಳಿದರು. ನಾಳೆ ಸಿಟಿ ಸ್ಕ್ಯಾನ್ ನಡೆಸಲಾಗುತ್ತದೆ, ನಂತರ ನಿಖರ ಸ್ಥಿತಿ ಸ್ಪಷ್ಟವಾಗಲಿದೆ ಎಂದರು. ಮಾಧ್ಯಮಗಳ ಹೆಚ್ಚಿನ ಪ್ರಶ್ನೆಗಳಿಗೆ ಅವರು “ಐ ಎಮ್ ನಾಟ್ ಎ ಡಾಕ್ಟರ್” ಎಂದು ಹೇಳಿ ಅಲ್ಲಿಂದ ತೆರಳಿದರು.
ಕೆಲ ದಿನಗಳ ಹಿಂದೆ ಸಚಿವ ಸುಧಾಕರ್ ಅವರು ಸಾಮಾನ್ಯ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರದ ದಿನಗಳಲ್ಲಿ ಅವರಿಗೆ ಹಠಾತ್ತನೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ.
ಶ್ವಾಸಕೋಶದ ಸೋಂಕು ಗಂಭೀರವಾಗುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ಅವರನ್ನು ಮಣಿಪಾಲ್ ಆಸ್ಪತ್ರೆಯಿಂದ ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.