ತುರುವೇಕೆರೆ : ವಿದ್ಯಾವಂತ ಯುವಕ, ಯುವತಿಯರು ಸರ್ಕಾರಿ ಉದ್ಯೋಗ ನೆಚ್ಚಿಕೊಳ್ಳದೆ ಸ್ವಂತ ಉದ್ಯೋಗ ಮಾಡುವುದರಿಂದ ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹಾಲಪ್ಪ ಪ್ರತಿಷ್ಠಾಪನದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿ ನೂತನವಾಗಿ ಮಹಿಳೆಯೊಬ್ಬರು ಪ್ರಾರಂಭಿಸಿರುವ ಜ್ಞಾನಶ್ರೀ ಫುಡ್ಸ್ ಗೆ (ಬೆಳ್ಳುಳ್ಳಿ ಸಿಪ್ಪೆ ತೆಗೆದು, ಶುದ್ಧ ಬೆಳ್ಳುಳ್ಳಿ ಒದಗಿಸುವ ಘಟಕ) ಭೇಟಿ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾವಂತ ಮಹಿಳೆಯೊಬ್ಬರು ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಸ್ವಂತ ಉದ್ದಿಮೆ ಪ್ರಾರಂಭಿಸಿ ಹತ್ತಾರು ಜನರಿಗೆ ಕೆಲಸ ನೀಡಿ ಅವರಿಗೂ ನೆರವಾಗುತ್ತಿರುವುದು ಬಹಳ ಸಂತೋಷ ತಂದಿದೆ. ತುರುವೇಕೆರೆ ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದ ಸೊಸೆಯಾಗಿ ಬಂದ ಶಿಲ್ಪಾರಕ್ಷಿತ್ ತನ್ನ ಗಂಡನ ಕುಟುಂಬದೊಂದಿಗೆ ಸೇರಿ ಬೆಳ್ಳುಳ್ಳಿ ಸಿಪ್ಪೆ ತೆಗೆದು, ಉತ್ತಮ ಗುಣಮಟ್ಟದ ಶುದ್ಧಿಕರೀಸಿದ ಬೆಳ್ಳುಳ್ಳಿಯನ್ನು ರಾಜ್ಯ, ಅಂತರರಾಜ್ಯಗಳಿಗೆ ಒದಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಿಲ್ಪಾರಕ್ಷಿತ್ ಅವರ ಸ್ವಂತ ಉದ್ದಿಮೆ ಸ್ಥಾಪಿಸುವ ಚಿಂತನೆ, ಛಲ ಇತರ ಮಹಿಳೆಯರಿಗೆ, ವಿದ್ಯಾವಂತ ಯುವಕ, ಯುವತಿಯರಿಗೆ ಮಾದರಿಯಾಗಿದೆ ಎಂದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವ ಉದ್ಯೋಗ ನಡೆಸಿ ಸ್ವಾಭಿಮಾನದ ಬದುಕನ್ನು ಸಾಗಿಸುವ ಯುವಸಮೂಹದ ಅಗತ್ಯ ದೇಶಕ್ಕಿದೆ. ವಿದ್ಯಾವಂತರು ಸರ್ಕಾರಿ ಕೆಲಸಗಳಿಗೆ ಅಲೆಯುವ ಬದಲು ಸ್ವಂತ ಉದ್ದಿಮೆ ಪ್ರಾರಂಭಿಸಿದರೆ ನಿರುದ್ಯೋಗ ಸಮಸ್ಯೆ ನಿವಾರಣೆಯ ಜೊತೆಗೆ ಹೊಸ ಹೊಸ ಆವಿಷ್ಕಾರಗಳು, ಉದ್ಯಮಗಳು ಸ್ಥಾಪಿತವಾಗಿ ದೇಶದ ಆರ್ಥಿಕ ಪರಿಸ್ಥಿತಿಗೆ ತನ್ನದೇ ಆದ ಕೊಡುಗೆಯನ್ನು ನೀಡಬಹುದಾಗಿದೆ ಎಂದರು.
ಜ್ಞಾನಶ್ರೀ ಫುಡ್ಸ್ ನ ಮಾಲೀಕರಾದ ಶಿಲ್ಪಾ ರಕ್ಷಿತ್ ಮಾತನಾಡಿ, ಸ್ವಂತ ಉದ್ದಿಮೆ ಸ್ಥಾಪಿಸುವ ಚಿಂತನೆ ಬಂದಾಗ ಮನೆಯವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡೆವು. ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ಸುಲಭದ ಕೆಲಸವಾದರೂ ಹೋಟೆಲ್, ರೆಸ್ಟೋರೆಂಟ್ ಮುಂತಾದ ಆಹಾರ ಪದಾರ್ಥ ತಯಾರಿಸುವ ಕೇಂದ್ರಗಳಿಗೆ ಶುದ್ದೀಕರಿಸಿದ ಗುಣಮಟ್ಟದ ಬೆಳ್ಳುಳ್ಳಿ ಸಿದ್ದಪಡಿಸಿದ ಮಾದರಿಯಲ್ಲೇ ಬೇಕಾಗುತ್ತದೆ. ಆ ಕಾರಣಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಾಯಧನ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದು ಬೆಳ್ಳುಳ್ಳಿ ಸಿಪ್ಪೆ ತಯಾರಿಕಾ ಘಟಕ ಪ್ರಾರಂಭಿಸಿದ್ದೇವೆ. ಪ್ರತಿನಿತ್ಯ ಸುಮಾರು ಒಂದು ಟನ್ ಶುದ್ಧಿಕರಿಸಿದ ಬೆಳ್ಳುಳ್ಳಿಗೆ ಬೇಡಿಕೆ ಇದ್ದು, ಬೆಂಗಳೂರು, ಮೈಸೂರು, ಶಿವಮೊಗ್ಗ, ಗೋವಾ, ಆಂಧ್ರಪ್ರದೇಶದ ಚಿತ್ತೂರು ನಗರಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹಾಲಪ್ಪ ಪ್ರತಿಷ್ಠಾನದ ಪುಟ್ಟರಾಜು, ಜ್ಞಾನಶ್ರೀ ಫುಡ್ಸ್ ನ ರಕ್ಷಿತ್, ಅನಿತಾ ನಂಜುಂಡಯ್ಯ ಮುಂತಾದವರಿದ್ದರು.