- ಅತಾವುಲ್ಲಾ, ಶಿರಾ
ಶಿರಾ: ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ರಾಜ್ಯ ಸರ್ಕಾರ ಮುಂದಿನ 15 ದಿನಗಳೊಳಗೆ ಶಿರಾ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್ ಪ್ರೊಫೆಸರ್ ರವಿವರ್ಮ ಕುಮಾರ್ ಎಚ್ಚರಿಸಿದರು.
ನಗರದ ಸಮತಾ ವಿದ್ಯಾಲಯದಲ್ಲಿ ಶಿರಾ ತಾಲ್ಲೂಕಿಗೆ ಭದ್ರಾ, ಎತ್ತಿನಹೊಳೆ ಹಾಗೂ ಹೇಮಾವತಿ ಯೋಜನೆಗಳಿಂದ ನೀರು ಹರಿಸುವಂತೆ ಒತ್ತಾಯಿಸಿ ಹೋರಾಟ ರೂಪಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶಿರಾ ತಾಲ್ಲೂಕಿನಲ್ಲಿ ಅಂತರ್ಜಲದ ಮೇಲಿನ ಅವಲಂಬನೆ ಹೆಚ್ಚಾಗಿದ್ದು, ನೀರಿನ ಗುಣಮಟ್ಟದ ಬಗ್ಗೆಯೂ ಆತಂಕ ಎದುರಾಗಿದೆ ಎಂದರು.
ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಲಭ್ಯವಾಗುತ್ತಿದೆ. ಇತ್ತೀಚೆಗೆ ಬರಗೂರಿನಲ್ಲಿ ತಾಯಿ ಎದೆಹಾಲಿನಲ್ಲಿಯೂ ಫ್ಲೋರೈಡ್ ಪತ್ತೆಯಾಗಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಅವರು, ಕುಡಿಯುವ ನೀರಿನ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಶಿರಾ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಕುಡಿಯುವ ನೀರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆದ್ಯತೆ ನೀಡಬೇಕು. ಮುಂದಿನ ಹೋರಾಟದಲ್ಲಿ ತಾಲ್ಲೂಕಿನ ಪ್ರತಿಯೊಂದು ಮನೆಯಿಂದ ಒಬ್ಬರಂತೆ ಜನರು ಹಾಗೂ ಸುಮಾರು 1,000 ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್ ಹೋರಾಟ ನಡೆಸಲು ಸಿದ್ಧರಾಗಬೇಕು ಎಂದು ಕರೆ ನೀಡಿದರು. ನೀರು ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಫ್ಲೋರೈಡ್ ಸಮಸ್ಯೆ ಗಂಭೀರ:
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ, ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು, ಶಿರಾ ತಾಲ್ಲೂಕು ಕೂಡ ಗಂಭೀರ ನೀರಿನ ಸಮಸ್ಯೆ ಎದುರಿಸುತ್ತಿದೆ. ನಂಜುಂಡಪ್ಪ ಆಯೋಗದ ವರದಿ ಪ್ರಕಾರ ಶಿರಾ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದ್ದು, ಕುಡಿಯುವ ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಶಿರಾ ಭಾಗದಲ್ಲಿ ಅಂತರ್ಜಲದ ಸಮಸ್ಯೆ ತೀವ್ರವಾಗಿದ್ದು, ಫ್ಲೋರೈಡ್ ಪ್ರಮಾಣ ಹೆಚ್ಚಾಗಿದೆ. ನಂದಿನಿ ಹಾಲಿನಲ್ಲಿಯೂ ಫ್ಲೋರೈಡ್ ಅಂಶ ಕಂಡುಬಂದಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಅವರು, ಫ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಿರಾಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ತುಮಕೂರು ನಾಲೆ ಕಾಮಗಾರಿ ವೇಗವಾಗಿ ಗೊಳಿಸಲು ಒತ್ತಾಯ
ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತುಮಕೂರು ಜಿಲ್ಲೆಯಲ್ಲಿ ವಿಳಂಬವಾಗುತ್ತಿದೆ. ತುಮಕೂರು ನಾಲೆಯ ಕಾಮಗಾರಿ ಆರಂಭವಾಗಿ ಹಲವು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಚಿತ್ರದುರ್ಗ ಭಾಗದಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡು ನೀರು ಹರಿಸಲಾಗುತ್ತಿದೆ. ಆದರೆ ತುಮಕೂರು ಭಾಗದಲ್ಲಿ ಕಾಮಗಾರಿ ಬಾಕಿ ಉಳಿದಿದೆ ಎಂದು ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಗೆ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಸಮಾನ ಪ್ರಮಾಣದಲ್ಲಿ ಅನುದಾನ ನೀಡಬೇಕು. ಅನುದಾನ ಹಂಚಿಕೆಯಲ್ಲಿ ತುಮಕೂರು ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, ಏಳು ಶಾಸಕರಿದ್ದರೂ ಈ ವಿಚಾರದಲ್ಲಿ ಸಮರ್ಪಕ ಒತ್ತಡ ಹೇರಲಾಗಿಲ್ಲ. ಚಿತ್ರದುರ್ಗ ಭಾಗದ ಜನಪ್ರತಿನಿಧಿಗಳು ಹಗಲು-ರಾತ್ರಿ ಹೋರಾಟ ನಡೆಸಿ ನೀರು ತರಲು ಪ್ರಯತ್ನಿಸಿದ್ದಾರೆ. ಅದೇ ಮಾದರಿಯಲ್ಲಿ ಶಿರಾ ತಾಲ್ಲೂಕಿನಲ್ಲಿಯೂ ನೀರಾವರಿ ಹೋರಾಟ ರೂಪಿಸಲಾಗುವುದು ಎಂದರು.
ಶಿರಾ ತಾಲ್ಲೂಕಿಗೆ ಭದ್ರಾ, ಎತ್ತಿನಹೊಳೆ ಹಾಗೂ ಹೇಮಾವತಿ ಯೋಜನೆಗಳ ನೀರು ಹರಿಸುವಂತೆ ಒತ್ತಾಯಿಸಿ ನಡೆದ ಸಭೆಯಲ್ಲಿ ಭದ್ರಾ ನೀರಾವರಿ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ದೊರೆ ರಂಗನಾಥ್ ಗೌಡ, ಬಿ.ವಿ. ಗುಂಡಪ್ಪ, ಗೋಮಾರದಹಳ್ಳಿ ಮಂಜುನಾಥ್, ಡಿ. ತಿಮ್ಮಯ್ಯ, ಎನ್.ಸಿ. ಮಂಜುನಾಥ್, ಮುಕುಂದಪ್ಪ, ಪರಮಶಿವಯ್ಯ, ವೆಂಕಟೇಶ್, ಚಿತ್ತಯ್ಯ, ಜಯಣ್ಣ, ರಾಮಣ್ಣ, ರವೀಂದ್ರ ಮಂಜುನಾಥ್, ನೀರಲಗುಡ್ಡ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು