ಬೆಂಗಳೂರು (ಏ. 29): ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವೈರಲ್ ವಿಡಿಯೋ (Viral Video) ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾರ್ಖಾನೆಯೊಂದರಲ್ಲಿ ಚಿತ್ರೀಕರಿಸಲಾದ ಈ ದೃಶ್ಯದಲ್ಲಿ, ಆಲೂಗಡ್ಡೆ ಚಿಪ್ಸ್ ತಯಾರಿಕೆಯ ಪ್ರಕ್ರಿಯೆ ಕಾಣಿಸಿಕೊಂಡಿದ್ದು, ಇದನ್ನು ನೋಡಿ ನೆಟಿಜನ್‌ಗಳು ಅಸಹ್ಯಗೊಂಡಿದ್ದಾರೆ. ನೈರ್ಮಲ್ಯ ನಿಯಮಗಳನ್ನು ಉಲ್ಲಂಘಿಸಿರುವಂತೆ ಕಾಣುವ ಈ ಕೆಲವೇ ಕ್ಷಣಗಳ ವಿಡಿಯೋ ಆನ್‌ಲೈನ್‌ನಲ್ಲಿ ವಿವಾದ ಹುಟ್ಟುಹಾಕಿದೆ.
ಸಾಬೂನು ನೀರಿನಲ್ಲಿ ಆಲೂಗಡ್ಡೆ ಕ್ಲೀನ್, ನಿರ್ಲಕ್ಷ್ಯ ಕೆಲಸಗಾರರು
ಈ ವೈರಲ್ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಕೇವಲ ಒಳ ಉಡುಪು ಧರಿಸಿ ದೊಡ್ಡ ಟ್ಯಾಂಕ್ ಒಳಗೆ ನಿಂತಿರುವುದು ಗೋಚರಿಸುತ್ತದೆ. ಟ್ಯಾಂಕ್‌ನಲ್ಲಿ ಕೊಳಕು ಸೋಪು ನೀರು ಹಾಗೂ ಹಸಿ ಆಲೂಗಡ್ಡೆ ತುಂಡುಗಳು ತುಂಬಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಆತ ಟ್ಯಾಂಕ್ ಒಳಗೆ ನಿಂತುಕೊಂಡೇ ಸಿಗರೇಟ್ ಸೇದುತ್ತಿರುವುದು ಮಾತ್ರವಲ್ಲದೆ, ಕ್ಯಾಮೆರಾಕ್ಕೆ ಮುಖ ಮಾಡಿ ನಗುತ್ತಿರುವ ದೃಶ್ಯವೂ ಕಾಣಿಸುತ್ತದೆ.
ಈ ಕ್ಲಿಪ್ ಗಮನಿಸಿದಾಗ, ಇದು ಆಲೂಗಡ್ಡೆಯನ್ನು ಹುರಿಯುವ ಮೊದಲು ಸ್ವಚ್ಛಗೊಳಿಸುವ ಪ್ರಕ್ರಿಯೆಯ ಭಾಗವಾಗಿರಬಹುದು ಎಂಬ ಅನುಮಾನ ಮೂಡುತ್ತದೆ. ಆದರೆ ಟ್ಯಾಂಕ್‌ನಲ್ಲಿರುವ ನೀರು ತುಂಬಾ ಅಸ್ವಚ್ಛ ಮತ್ತು ಕೆಸರುಮಯವಾಗಿದ್ದು, ಇದನ್ನು ನೋಡಿ ಅನೇಕರಿಗೆ ವಾಕರಿಕೆ ಉಂಟಾಗಿದೆ.
@fact.flow_india ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ಇದಕ್ಕೆ ನೆಟಿಜನ್‌ಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ಇದನ್ನು ನೋಡಿ ಅಸಹ್ಯವಾಗುತ್ತಿದೆ”, “ಬಹುಶಃ ಇದರಿಂದಲೇ ಚಿಪ್ಸ್ ರುಚಿ ಬದಲಾಗಿರಬಹುದು”, “ದಯವಿಟ್ಟು ಕಂಪನಿಯ ಹೆಸರು ಬಹಿರಂಗಪಡಿಸಿ, ಜನರಿಗೆ ಎಚ್ಚರಿಕೆ ನೀಡಬೇಕು” ಎಂಬಂತಹ ಕಾಮೆಂಟ್‌ಗಳು ಹರಿದುಬಂದಿವೆ.
ಆಹಾರ ಸುರಕ್ಷತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುವುದು ಇದೇ ಮೊದಲ ಬಾರಿ ಅಲ್ಲ. ಇತ್ತೀಚೆಗೆ ಬೀದಿ ವ್ಯಾಪಾರಿಯೊಬ್ಬರು ಅಸ್ವಚ್ಛ ರೀತಿಯಲ್ಲಿ ಆಹಾರ ಹಸ್ತಾಂತರಿಸುತ್ತಿರುವ ವಿಡಿಯೋ ಸಹ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.