ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ: ಪಟ್ಟಣದ ಜನನಿಬಿಡ ದಬ್ಬೇಘಟ್ಟ ರಸ್ತೆಯಲ್ಲಿ ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸಿನ ಟೈರ್ ದಿಢೀರ್ ಬ್ಲಾ್ಸ್ಟ್ ಆಗಿದ್ದು, ಚಾಲಕರ ಚಾಲನಾ ಕೌಶಲ್ಯದಿಂದ ಭಾರೀ ಅನಾಹುತ ತಪ್ಪಿದೆ.
ತುರುವೇಕೆರೆ ಬಸ್ ನಿಲ್ದಾಣದಿಂದ ಕೆ.ಬಿ. ಕ್ರಾಸಿಗೆ ಜನರನ್ನು ಕರೆದೊಯ್ದು ವಾಪಸ್ಸು ತುರುವೇಕೆರೆ ಬಸ್ ನಿಲ್ದಾಣಕ್ಕೆ ಬರುವ ವೇಳೆ ದಬ್ಬೇಘಟ್ಟ ರಸ್ತೆಯ ಜೆಡಿಎಸ್ ಕಛೇರಿ ಬಳಿ ಬಸ್ಸಿನ ಟೈರ್ ಬ್ಲಾಸ್ಟ್ ಆಗಿದೆ. ಬಸ್ಸಿನ ಮುಂಭಾಗದ ಎಡಬದಿಯ ಟೈರ್ ಬ್ಲಾಸ್ಟ್ ಆಗಿದ್ದು, ರಸ್ತೆಯಲ್ಲಿ ಇದ್ದ ನಾಗರೀಕರು, ಬಸ್ಸಿನಲ್ಲಿದ್ದ ಪ್ರಯಾಣಿಕರು ಟೈರ್ ಬ್ಲಾಸ್ಟ್ ಶಬ್ದಕ್ಕೆ ಕೆಲಕಾಲ ಗಾಬರಿಯಾಗಿದ್ದಾರೆ. ಬಸ್ಸಿನ ಚಾಲಕ ತನ್ನ ಅನುಭವದ ಆಧಾರದಲ್ಲಿ ಜನನಿಬಿಡ ರಸ್ತೆಯಲ್ಲಿ ಬಸ್ಸಿನ ಟೈರ್ ಬ್ಲಾಸ್ಟ್ ಆದರೂ ಯಾವುದೇ ಅನಾಹುತ ಆಗದಂತೆ ಬಸ್ಸನ್ನು ಚಲಾಯಿಸಿ ಮೈಸೂರು ಕ್ಲಿನಿಕ್ ವರೆಗೂ ತಂದು ನಿಧಾನವಾಗಿ ಬಸ್ಸನ್ನು ನಿಲ್ಲಿಸಿದ್ದಾರೆ.
ಕೆ.ಬಿ. ಕ್ರಾಸಿನಿಂದ ತುರುವೇಕೆರೆ ಮಾರ್ಗ ಸಂಚರಿಸುವ ಬಸ್ಸಿನ (ಕೆಎ 06 ಎಫ್ 1052) ಟೈರ್ ಬ್ಲಾಸ್ಟ್ ಆಗಿದೆ. ಮೊದಲೇ ಸವೆದು ಹೋಗಿದ್ದ ಟೈರನ್ನು ರಿಬೆಲ್ಟ್ ಮಾಡಿ ಬಸ್ಸಿಗೆ ಹಾಹಲಾಗಿದೆ. ಇದೇ ಬಸ್ಸಿನ ಹಿಂಭಾಗದ ಟೈರ್ ಸಹ ರಿಬೆಲ್ಟ್ ಮಾಡಿದ್ದಾಗಿದ್ದು, ಅದು ಸಹ ಕೆಲವೇ ದಿನದಲ್ಲಿ ಬ್ಲಾಸ್ಟ್ ಆಗುವ ಸಾಧ್ಯತೆ ಇದೆ. ಈ ದಿನ ಬ್ಲಾಸ್ಟ್ ಆದ ಟೈರನ್ನು ಬದಲಿಸಲು ಘಟಕದಿಂದ ಬಂದ ಟೈರ್ ಸಹ ರಿಬೆಲ್ಟ್ ಮಾಡಲಾಗಿದ್ದೆನ್ನುವುದು ಘಟಕದ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಮಹಿಳೆಯರಿಗೆ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಘೋಷಿಸಿರುವ ಸರ್ಕಾರ ಉತ್ತಮ ಬಸ್ಸಿನ ಸೌಲಭ್ಯ ನೀಡಬೇಕೆಂಬ ಸೌಜನ್ಯವನ್ನು ಹೊಂದಿಲ್ಲ, ಪ್ರಯಾಣಿಕರು ಸುರಕ್ಷಿತ ಭಾವನೆಯಲ್ಲಿ ಸಾರಿಗೆ ಸಂಸ್ಥೆ ಬಸ್ಸನ್ನು ಏರುತ್ತೇವೆ. ಸಾರಿಗೆ ಸಂಸ್ಥೆ ಬಸ್ಸುಗಳೇ ಹೀಗೇ ಅಪಾಯಕ್ಕೆ ದೂಡಿದರೆ ಗತಿ ಏನು ಎಂದು ನಾಗರೀಕರು ಪ್ರಶ್ನಿಸಿದ್ದಾರೆ.
ಬಸ್ಸಿನ ಟೈರ್ ಬ್ಲಾಸ್ಟ್ ಆಗಿರುವುದು ಇದೇ ಮೊದಲಲ್ಲ. ಹೀಗೇ ಹಲವು ಬಾರಿ ತಾಲೂಕಿನ ಹಲವೆಡೆ ಈ ರೀತಿಯಲ್ಲಿ ಹಾಗೂ ವಿವಿಧ ಕಾರಣಗಳಿಗಾಗಿ ಬಸ್ಸು ಕೆಟ್ಟು ನಿಂತಿರುವ ಉದಾಹರಣೆಗಳು ಸಾಕಷ್ಟಿದೆ. ಘಟಕಕ್ಕೆ ಉತ್ತಮ ಬಸ್ಸು, ಬಿಡಿಭಾಗಗಳು, ಟೈರ್ ಹಾಗೂ ಸಲಕರಣೆಗಳನ್ನು ನೀಡಿದರೆ ಬಸ್ಸುಗಳನ್ನು ರಿಪೇರಿ ಮಾಡಲು ಸಾಧ್ಯ ಎನ್ನಲಾಗಿದೆ.
ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು, ಸಾರಿಗೆ ಸಂಸ್ಥೆ ಜಿಲ್ಲಾಧಿಕಾರಿಗಳು, ಅಧಿಕಾರಿ ವರ್ಗ ತುರುವೇಕೆರೆ ಸಾರಿಗೆ ಘಟಕದ ಅವ್ಯವಸ್ಥೆ ಬಗ್ಗೆ, ಉತ್ತಮ ಬಸ್ಸುಗಳನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ.