ವಾಷಿಂಗ್ಟನ್: ಅಮೆರಿಕದ ಮೌಂಟೇನ್ ಹೋಮ್ ವಾಯುನೆಲೆಯಲ್ಲಿ ನಡೆದ ಏರ್ ಶೋ ವೇಳೆ ಎರಡು EA-18G ಗ್ರೋಲರ್ ಯುದ್ಧ ವಿಮಾನಗಳು (Fighter Jets) ಆಗಸದಲ್ಲೇ ಪರಸ್ಪರ ಡಿಕ್ಕಿಯಾಗಿ ಪತನಗೊಂಡ ಘಟನೆ ನಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆ ವಾಯುಪ್ರದೇಶವನ್ನು ತಕ್ಷಣವೇ ಲಾಕ್‌ಡೌನ್ ಮಾಡಲಾಗಿದೆ.
ಭಾನುವಾರ ಮಧ್ಯಾಹ್ನ 12:30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಈ ಅವಘಡ ಸಂಭವಿಸಿದ್ದು, ಬಿರುಗಾಳಿಯ ಪರಿಣಾಮ ಒಂದು ಫೈಟರ್ ಜೆಟ್ ನಿಯಂತ್ರಣ ತಪ್ಪಿ ಮತ್ತೊಂದು ಯುದ್ಧ ವಿಮಾನಕ್ಕೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಿಮಾನಗಳು ಹಾನಿಗೀಡಾಗಿ ಆಕಾಶದಲ್ಲಿ ಬೆಂಕಿಯ ಜ್ವಾಲೆಗಳು ಚಿಮ್ಮಿದ ದೃಶ್ಯ ಕಂಡುಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಪಘಾತಕ್ಕೀಡಾದ ವಿಮಾನಗಳು ಅಮೆರಿಕದ ನೌಕಾಪಡೆ ಬಳಸುವ ಅತ್ಯಾಧುನಿಕ EA-18G ಗ್ರೋಲರ್ ಯುದ್ಧ ವಿಮಾನಗಳಾಗಿವೆ. ಇವು F-18 ಹಾರ್ನೆಟ್ ಮಾದರಿಯ ಸುಧಾರಿತ ರೂಪಾಂತರಗಳಾಗಿದ್ದು, ವಾಯುನೆಲೆಯಿಂದ ಸುಮಾರು ಎರಡು ಮೈಲಿ ದೂರದಲ್ಲಿ ಪತನಗೊಂಡಿವೆ. ಘಟನೆ ತಿಳಿಯುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಹಾಗೂ ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿವೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಆಗಸದಲ್ಲೇ ಹೊತ್ತಿ ಉರಿದ ಜೆಟ್, ಪವಾಡಸದೃಶವಾಗಿ ಬದುಕುಳಿದ ಸಿಬ್ಬಂದಿ
ಭೀಕರ ಡಿಕ್ಕಿಯಿಂದ ಯುದ್ಧ ವಿಮಾನಗಳು ಆಗಸದಲ್ಲೇ ಬೆಂಕಿಗಾಹುತಿಯಾದರೂ, ಪೈಲಟ್ ಸೇರಿ ನಾಲ್ವರು ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಅಮೆರಿಕ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದು, ಚಿಕಿತ್ಸೆಗಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಮೌಂಟೇನ್ ಹೋಮ್ ವಾಯುನೆಲೆಯಲ್ಲಿ ಈ ರೀತಿಯ ಅವಘಡಗಳು ಇದೇ ಮೊದಲಲ್ಲ. 2018ರಲ್ಲಿ ಹ್ಯಾಂಗ್ ಗ್ಲೈಡರ್ ಪೈಲಟ್ ರನ್‌ವೇ ಅಪಘಾತದಲ್ಲಿ ಸಾವನ್ನಪ್ಪಿದ್ದರೆ, 2003ರಲ್ಲಿ ಥಂಡರ್‌ಬರ್ಡ್ ಜೆಟ್ ಪತನಗೊಂಡಿತ್ತು. ಆದರೆ ಆ ಸಂದರ್ಭದಲ್ಲಿ ಪೈಲಟ್ ಜೀವಾಪಾಯದಿಂದ ಪಾರಾಗಿದ್ದರು.