ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರಲ್ಲಿ Lucknow Super Giants ತಂಡದ ಕಳಪೆ ಪ್ರದರ್ಶನ ಇನ್ನೂ ಮುಂದುವರಿದಿದೆ. ಈ ಹಿನ್ನೆಲೆ ತಂಡದ ಭವಿಷ್ಯ ಹಾಗೂ ನಾಯಕ Rishabh Pant ಅವರ ಫಾರ್ಮ್ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ ನಡುವೆ ಮುಖ್ಯ ಕೋಚ್ Justin Langer ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆ ಎಲ್ಲರ ಗಮನ ಸೆಳೆದಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ಕೇವಲ 15 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೂ, ಕೋಚ್ ಲ್ಯಾಂಗರ್ ಅವರ ಬೆಂಬಲ ಹಿಂತೆಗೆದುಕೊಳ್ಳಲಿಲ್ಲ. 7ನೇ ಸೋಲಿನ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪಂತ್ ಫಾರ್ಮ್ ಹಾಗೂ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲ್ಯಾಂಗರ್, ಅಭ್ಯಾಸ ಪಂದ್ಯದಲ್ಲಿ ಪಂತ್ ಕೇವಲ 30-40 ಎಸೆತಗಳಲ್ಲಿ 95 ರನ್ ಸಿಡಿಸಿದ್ದರು ಎಂದು ತಿಳಿಸಿದರು. ಆ ಅದ್ಭುತ ಪ್ರದರ್ಶನವೇ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ನಿರ್ಧಾರಕ್ಕೆ ಕಾರಣವಾಯಿತು ಎಂದರು.
ಆದರೆ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೂ ಕಾರಣವಾಗಿದೆ. ಏಕೆಂದರೆ ಪಂತ್ ಆರ್ಭಟಿಸಿದ್ದದು ಸ್ವಂತ ತಂಡದ ಬೌಲರ್‌ಗಳ ವಿರುದ್ಧವೇ ಎಂಬ ಕಾರಣಕ್ಕೆ, ಲ್ಯಾಂಗರ್ ಮಾತುಗಳು ಎಲ್‌ಎಸ್‌ಜಿ ಬೌಲಿಂಗ್ ದೌರ್ಬಲ್ಯವನ್ನೇ ತೋರಿಸುತ್ತವೆ ಎಂದು ಅಭಿಮಾನಿಗಳು ವ್ಯಂಗ್ಯವಾಡುತ್ತಿದ್ದಾರೆ.
ಇದೇ ವೇಳೆ ಪಂತ್ ನಾಯಕತ್ವವನ್ನು ಶ್ಲಾಘಿಸಿದ ಲ್ಯಾಂಗರ್, ತಂಡದ ಹಿತದೃಷ್ಟಿಯಿಂದ ನಿಕೋಲಸ್ ಪೂರನ್‌ಗೆ ಮೇಲಿನ ಕ್ರಮಾಂಕದಲ್ಲಿ ಅವಕಾಶ ನೀಡಲು ಪಂತ್ ತಮ್ಮ ಸ್ಥಾನ ಬಿಟ್ಟುಕೊಟ್ಟರು ಎಂದು ಹೇಳಿದರು. ಈ ನಿರ್ಧಾರ ಒಬ್ಬ ಉತ್ತಮ ನಾಯಕನ ಗುಣವನ್ನು ತೋರಿಸುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಆದರೆ ಇದಕ್ಕೂ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿನ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಪಂತ್ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ, ಅವರು ತಮ್ಮ ಸ್ಥಾನ ಬದಲಾಯಿಸಿಕೊಂಡರು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ 27 ಕೋಟಿ ರೂ. ಮೊತ್ತದೊಂದಿಗೆ ಐಪಿಎಲ್ ಇತಿಹಾಸದ ದುಬಾರಿ ಆಟಗಾರನಾಗಿ ಕಣಕ್ಕಿಳಿದ ಪಂತ್ ಅವರಿಂದ ಇನ್ನೂ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿಲ್ಲ. ಅವರ ನಾಯಕತ್ವದ ಪರಿಣಾಮವೂ ತಂಡದ ಫಲಿತಾಂಶಗಳಲ್ಲಿ ಗೋಚರಿಸುತ್ತಿಲ್ಲ. 228 ರನ್‌ಗಳಿಸಿದರೂ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿರುವುದು ಇದಕ್ಕೆ ಸಾಕ್ಷಿ.
ಇನ್ನೂ ಸಹ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿಲ್ಲದ ಲಕ್ನೋ ತಂಡ, ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿದೆ. ಜೊತೆಗೆ ಅದೃಷ್ಟವೂ ಕೈಹಿಡಿಯಬೇಕಿದೆ. ಹೀಗಾಗಿ ಎಲ್‌ಎಸ್‌ಜಿ ತಂಡ ಪ್ಲೇಆಫ್ ಪ್ರವೇಶಿಸಬಹುದೇ ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ.