ಬೆಂಗಳೂರು: ಕೃಷಿ ಇಲಾಖೆಯಲ್ಲಿ (Agriculture Dept) ಖಾಲಿ ಇರುವ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಒಟ್ಟು 890 ಸ್ಥಾನಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 10ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಬಗ್ಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ (H Prasanna) ಮಾಹಿತಿ ನೀಡಿದ್ದು, ಕಲ್ಯಾಣ ಕರ್ನಾಟಕ ಹಾಗೂ ಇತರ ಮೂಲ ವೃಂದದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಮೇ 12ರವರೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಉಳಿಕೆ ಮೂಲ ವೃಂದದ ಗ್ರೂಪ್-ಬಿ ಹುದ್ದೆಗಳಡಿ ಒಟ್ಟು 632 ಸ್ಥಾನಗಳಿದ್ದು, ಅದರಲ್ಲಿ 81 ಕೃಷಿ ಅಧಿಕಾರಿ ಹಾಗೂ 551 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿವೆ. ಇವುಗಳಿಗೆ ಜೂನ್ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಇದೇ ರೀತಿ ಕಲ್ಯಾಣ ಕರ್ನಾಟಕ ವೃಂದದ 258 ಹುದ್ದೆಗಳ (40 ಕೃಷಿ ಅಧಿಕಾರಿ ಹಾಗೂ 218 ಸಹಾಯಕ ಕೃಷಿ ಅಧಿಕಾರಿ) ಪರೀಕ್ಷೆ ಜೂನ್ 14ರಂದು ನಡೆಯಲಿದೆ.
ಎರಡೂ ವೃಂದದ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಜೂನ್ 6ರಂದು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.