ನವದೆಹಲಿ: Gujarat Titans ತಂಡದ ಆರಂಭಿಕ ಬ್ಯಾಟರ್‌ಗಳಾದ Shubman Gill ಮತ್ತು Sai Sudharsan ಐಪಿಎಲ್ ಇತಿಹಾಸದ ಅತ್ಯಂತ ಪರಿಣಾಮಕಾರಿ ಬ್ಯಾಟಿಂಗ್ ಜೋಡಿ ಎಂದು ಭಾರತದ ಮಾಜಿ ಕ್ರಿಕೆಟಿಗ Suresh Raina ಪ್ರಶಂಸಿಸಿದ್ದು, ಈ ಜೋಡಿಯ ನಿರಂತರ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ಗಿಲ್ ಮತ್ತು ಸುದರ್ಶನ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೊತೆಯಾಟಗಳಲ್ಲಿ ಒಂದನ್ನು ನಿರ್ಮಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಮಿಂಚಿದ ಈ ಜೋಡಿ, Indian Premier League 2026 ಆವೃತ್ತಿಯಲ್ಲೂ ಅದೇ ಲಯ ಮುಂದುವರಿಸಿದೆ.
ಜಿಟಿ ತಂಡದ ಈ ಆರಂಭಿಕ ಜೋಡಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ 10ನೇ ಶತಕದ ಜೊತೆಯಾಟವನ್ನು ದಾಖಲಿಸಿ ವಿಶೇಷ ಸಾಧನೆ ಮಾಡಿದೆ. ಈ ಮೂಲಕ Chris Gayle-Virat Kohli, Babar Azam-Mohammad Rizwan ಹಾಗೂ AB de Villiers-ಕೊಹ್ಲಿ ಜೋಡಿಗಳ ದಾಖಲೆ ಸರಿಗಟ್ಟಿದೆ.
‘ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದ ಅತ್ಯುತ್ತಮ ಬ್ಯಾಟಿಂಗ್ ಜೋಡಿ. ಕೇವಲ 46 ಇನಿಂಗ್ಸ್‌ಗಳಲ್ಲಿ ಅವರು 21 ಬಾರಿ 50ಕ್ಕೂ ಅಧಿಕ ರನ್‌ಗಳ ಜೊತೆಯಾಟ ಕಟ್ಟಿದ್ದಾರೆ’ ಎಂದು ರೈನಾ ಜಿಯೋಹಾಟ್‌ಸ್ಟಾರ್‌ನ ‘ಚಾಂಪಿಯನ್ಸ್ ವಾಲಿ ಕಾಮೆಂಟರಿ’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
‘ಗೇಲ್ ಮತ್ತು ಕೊಹ್ಲಿ ನಂತರದ ಸ್ಥಾನದಲ್ಲಿದ್ದರೆ, ಎಬಿ ಡಿವಿಲಿಯರ್ಸ್ ಮತ್ತು ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದರಿಂದ ಗಿಲ್ ಮತ್ತು ಸಾಯಿ ಅವರ ಗುಣಮಟ್ಟ ಸ್ಪಷ್ಟವಾಗುತ್ತದೆ. ಇಬ್ಬರೂ ಪರಸ್ಪರರ ಆಟವನ್ನು ಅತ್ಯುತ್ತಮವಾಗಿ ಪೂರೈಸುತ್ತಾರೆ. ವಿಶೇಷವೆಂದರೆ, ಕೇವಲ 46 ಇನಿಂಗ್ಸ್‌ಗಳಲ್ಲಿ 21 ಬಾರಿ ಐವತ್ತಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಿರ್ಮಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಗೇಲ್-ಕೊಹ್ಲಿ ಈ ಮೈಲಿಗಲ್ಲು ತಲುಪಲು 59 ಇನಿಂಗ್ಸ್ ತೆಗೆದುಕೊಂಡಿದ್ದರೆ, ಎಬಿಡಿ-ಕೊಹ್ಲಿ ಜೋಡಿಗೆ 76 ಇನಿಂಗ್ಸ್ ಬೇಕಾಗಿತ್ತು.
‘ಈ ಇಬ್ಬರೂ ಅತ್ಯಂತ ಫಿಟ್ ಆಟಗಾರರು. ಯಾವಾಗ ದಾಳಿ ಮಾಡಬೇಕು, ಯಾವ ಹೊಡೆತಗಳನ್ನು ಆಯ್ಕೆ ಮಾಡಬೇಕು ಎಂಬ ಅರಿವು ಅವರಿಗೆ ಚೆನ್ನಾಗಿದೆ. ನಿರಂತರವಾಗಿ ರನ್ ಗಳಿಸುವ ಸಾಮರ್ಥ್ಯವೇ ಅವರ ದೊಡ್ಡ ಬಲ. ಈ ಸೀಸನ್‌ನಲ್ಲಿ ಅವರ ಮಟ್ಟದ ಸ್ಥಿರತೆ ತೋರಿಸಿರುವ ಮತ್ತೊಂದು ಬ್ಯಾಟಿಂಗ್ ಜೋಡಿ ಇಲ್ಲ’ ಎಂದು ರೈನಾ ವಿಶ್ಲೇಷಿಸಿದ್ದಾರೆ.
ಭಾರತದ ಮಾಜಿ ವೇಗಿ Umesh Yadav ಕೂಡ ಗಿಲ್-ಸುದರ್ಶನ್ ಜೋಡಿಯನ್ನು ಹೊಗಳಿದ್ದಾರೆ.
‘ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಪವರ್‌ಪ್ಲೇಯನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಾರೆ. ಅನಗತ್ಯ ಅಪಾಯಕಾರಿ ಹೊಡೆತಗಳಿಗೆ ಹೋಗುವುದಿಲ್ಲ. ಅವರು ಅಷ್ಟು ಸುಲಭವಾಗಿ ಬ್ಯಾಟಿಂಗ್ ಮಾಡುತ್ತಾರೆ, ರನ್‌ಗಳು ವೇಗವಾಗಿ ಬರುತ್ತಿವೆ ಅನ್ನಿಸುವುದೇ ಇಲ್ಲ. ಆದರೆ ಪವರ್‌ಪ್ಲೇ ಮುಗಿಯುವಷ್ಟರಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಈಗಾಗಲೇ 60 ರನ್‌ಗಳು ಕಾಣಿಸುತ್ತವೆ. ಅದೇ ಅವರ ಕ್ಲಾಸ್. ತಮ್ಮ ಸಾಮರ್ಥ್ಯ ಹಾಗೂ ಪಿಚ್‌ನ ಸ್ವಭಾವಕ್ಕೆ ತಕ್ಕಂತೆ ಆಟ ಆಡುತ್ತಾರೆ’ ಎಂದು ಉಮೇಶ್ ಹೇಳಿದ್ದಾರೆ.