ಓರ್ವ ವ್ಯಕ್ತಿ ಮತ್ತೊಬ್ಬನ ಹೆಂಡತಿಯ ಅಪಹರಿಸಿಕೊಂಡು ಹೋಗುತ್ತಾನೆ. ದ್ವೇಷ ಮತ್ತು ಆಕ್ರೋಶದ ಜ್ವಾಲೆಯಲ್ಲಿ ಬೇಯುತ್ತಿದ್ದ ಅಪಹೃತ ಮಹಿಳೆಯ ಪತಿ, ಅಪಹರಣಕಾರನ ಹೆಂಡತಿಯನ್ನು ಎಳೆತಂದು ತಾನೂ ಮದುವೆಯಾಗಿ ತನ್ನ ರೋಷಾಗ್ನಿ ತೀರಿಸಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ.
ಸದ್ಯ ದೇಶಾದ್ಯಂತ ಈ ವಿಷಯ ತುಂಬಾ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಸ್ವಾತಂತ್ರ್ಯ ಹಕ್ಕು ಬಾಧ್ಯತೆಗಳ ಕುರಿತು ಭಾರಿ ಚರ್ಚೆ ನಡೆಯುತ್ತಿದೆ.
ಅಪಹರಣಕ್ಕೊಳಗಾದ ಮಹಿಳೆಯ ಪತಿ, ಅಪಹರಣಕಾರನ ಹೆಂಡತಿಯನ್ನು ಎಳೆದೊಯ್ದು ಮದುವೆಯಾಗುವ ಮೂಲಕ ವಿಕೃತಿ ಮೆರೆದಿದ್ದಾನೆ. ಜೊತೆಗೆ ಅಪಹರಣವಾಗಿದ್ದ ತನ್ನ ಹೆಂಡತಿಯನ್ನು ಅಪಹರಿಸಿದವನಿಗೆ ಬಿಟ್ಟುಕೊಟ್ಟು ಅನಧಿಕೃತ ಹೆಂಡತಿಯರ ಅದಲು ಬದಲು ಮಾಡಿದ್ದಾನೆ. ಈ ವಿಚಾರದಲ್ಲಿ ಮಹಿಳಾಪರ ಸಂಘಟನೆಗಳು ಧ್ವನಿ ಎತ್ತುತ್ತಿದ್ದು ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ಎಲ್ಲ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿದ್ದ ಮತ್ತು ಈ ಕೃತ್ಯಕ್ಕೆ ಸಹಕಾರ ನೀಡಿದ್ದ ಹಲವು ಮಂದಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಇಬ್ಬರು ಮಹಿಳೆಯರ ಹೇಳಿಕೆಯನ್ನ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಪ್ರಥಮವಾಗಿ ಅಪಹರಣವಾಗಿದ್ದ ಮಹಿಳೆ ಮತ್ತು ನಂತರದಲ್ಲಿ ಮತ್ತೊಬ್ಬನ ಬಲವಂತಕ್ಕೆ ಮದುವೆಯಾದ ಮತ್ತೋರ್ವ ಮಹಿಳೆ ಇಬ್ಬರ ಮನಸ್ಸಿನ ಭಾವನೆಗಳಿಗೆ ಬೆಲೆ ಇಲ್ಲವೇ...! ಆ ಮಹಿಳೆಯರ ತಪ್ಪಾದರೂ ಏನು...? ಇದು ಮಹಿಳಾ ಸ್ವಾತಂತ್ರ್ಯ ಮತ್ತು ಅವರ ಸ್ವಾಭಿಮಾನಕ್ಕೆ ಮತ್ತು ಗೌರವಕ್ಕೆ ತಂದ ಧಕ್ಕೆಯಾಗಿದೆ ಎಂಬ ವಾದ ತೀವ್ರಗೊಳ್ಳುತ್ತಿದೆ. ಈ ರೀತಿಯ ಒಪ್ಪಿಗೆ ಇಲ್ಲದ ಮಹಿಳೆಯರ ವಿವಾಹವಾಗುವ ಮತ್ತು ದ್ವೇಷ ಸಾಧನೆಗಾಗಿ ಮಹಿಳೆಯರ ಬದುಕನ್ನ ಅವರ ಸ್ವಾತಂತ್ರ್ಯವನ್ನು ದಳವಾಗಿಸಿಕೊಳ್ಳುವ ಈ ಕೃತ್ಯ ತುಂಬಾ ಹೇಯಕರವಾದದ್ದು ಎಂಬ ಅಭಿಪ್ರಾಯ ವ್ಯಾಪಕವಾಗುತ್ತಿದೆ.