ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳೆ ನಡೆಯುವ ಕ್ರಿಕೆಟ್ ಭ್ರಷ್ಟಾಚಾರ ಮತ್ತು ರಹಸ್ಯ ಮಾಹಿತಿ ಸೋರಿಕೆಗೆ ಕಡಿವಾಣ ಹಾಕಲು ಬಿಸಿಸಿಐ (BCCI) ಮಹತ್ವದ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಆಟಗಾರರು ಹಾಗೂ ಪಂದ್ಯಾಧಿಕಾರಿಗಳು ಮೈದಾನ ಮತ್ತು ಡ್ರೆಸ್ಸಿಂಗ್ ರೂಮ್ ಪ್ರದೇಶಗಳಲ್ಲಿ ಅತ್ಯಾಧುನಿಕ ಸ್ಮಾರ್ಟ್ ಸನ್‌ಗ್ಲಾಸ್‌ಗಳನ್ನು (Smart Sunglasses) ಬಳಸುವುದನ್ನು ಬಿಸಿಸಿಐನ ಆಂಟಿ-ಕರಪ್ಷನ್ ಯುನಿಟ್ (ACU) ಸಂಪೂರ್ಣ ನಿಷೇಧಿಸಿದೆ.
ಕೇವಲ ಮೈದಾನದಲ್ಲಷ್ಟೇ ಅಲ್ಲ, ಆಟಗಾರರು ಮತ್ತು ಮ್ಯಾಚ್ ಅಧಿಕಾರಿಗಳಿಗೆ ಮೀಸಲಾಗಿರುವ ಪಿಎಂಒಎ (PMOA – Players and Match Officials Area) ಪ್ರದೇಶಕ್ಕೂ ಇಂತಹ ಸ್ಮಾರ್ಟ್ ಗ್ಲಾಸ್‌ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
ಇತ್ತೀಚಿನ ಸ್ಮಾರ್ಟ್ ಸನ್‌ಗ್ಲಾಸ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್, ಆಡಿಯೋ-ವಿಡಿಯೋ ಕಾಲಿಂಗ್, ಗುಪ್ತ ಕ್ಯಾಮೆರಾ ಹಾಗೂ ಮೆಸೇಜಿಂಗ್ ವ್ಯವಸ್ಥೆಗಳಂತಹ ಆಧುನಿಕ ತಂತ್ರಜ್ಞಾನಗಳಿವೆ. ಈ ಹಿನ್ನೆಲೆ ಬಿಸಿಸಿಐ ಇದನ್ನು ಕೇವಲ ಸನ್‌ಗ್ಲಾಸ್ ಎಂದು ಪರಿಗಣಿಸದೇ ಪ್ರಮುಖ ಸಂವಹನ ಸಾಧನವೆಂದು ಗುರುತಿಸಿದೆ. ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್, ಡಗೌಟ್ ಅಥವಾ ಪಿಚ್ ಸಂಬಂಧಿತ ಮಾಹಿತಿಗಳು ರಿಯಲ್‌ಟೈಮ್‌ನಲ್ಲಿ ಬುಕ್ಕಿಗಳಿಗೆ ಸೋರಿಕೆಯಾಗದಂತೆ ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎಲ್ಲೆಲ್ಲಿ ನಿಷೇಧ ಅನ್ವಯ?
ಆಟಗಾರರ ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಟೀಮ್ ಡಗೌಟ್‌ಗಳು, ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳ ಕೊಠಡಿಗಳು, ಪಂದ್ಯ ನಡೆಯುವ ವೇಳೆ ಆಟಗಾರರು ಹಾಗೂ ಅಧಿಕಾರಿಗಳು ಕುಳಿತುಕೊಳ್ಳುವ ವಿಶೇಷ ಗ್ಯಾಲರಿಗಳಲ್ಲಿ ಈ ನಿಷೇಧ ಜಾರಿಯಲ್ಲಿರುತ್ತದೆ.
ಹೊಸ ನಿಯಮದ ಪ್ರಕಾರ, ಪಂದ್ಯದ ದಿನ ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ಸದಸ್ಯರು ಪಿಎಂಒಎ ಪ್ರದೇಶ ಪ್ರವೇಶಿಸುವ ಮೊದಲು ತಮ್ಮ ಮೊಬೈಲ್ ಫೋನ್, ಸ್ಮಾರ್ಟ್ ವಾಚ್‌ಗಳ ಜೊತೆಗೆ ಸ್ಮಾರ್ಟ್ ಸನ್‌ಗ್ಲಾಸ್‌ಗಳನ್ನೂ ಸೆಕ್ಯೂರಿಟಿ ಲೈಸನ್ ಆಫೀಸರ್ (SLO) ಬಳಿ ಕಡ್ಡಾಯವಾಗಿ ಜಮಾ ಮಾಡಬೇಕು.
ತಪ್ಪಿದರೆ ಕಠಿಣ ಕ್ರಮ
ನಿಯಮ ಉಲ್ಲಂಘಿಸಿ ಯಾವುದೇ ಸ್ಮಾರ್ಟ್ ಸಾಧನ ಬಳಸುತ್ತಿರುವುದು ಪತ್ತೆಯಾದರೆ ಆಟಗಾರರು ಅಥವಾ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಜೊತೆಗೆ ಭಾರೀ ಮೊತ್ತದ ದಂಡವೂ ವಿಧಿಸಲಾಗುತ್ತದೆ. ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಒಬ್ಬರು ಡಗೌಟ್‌ನಲ್ಲಿ ಮೊಬೈಲ್ ಬಳಸಿದ್ದಕ್ಕಾಗಿ ಬಿಸಿಸಿಐ 1 ಲಕ್ಷ ರೂ. ದಂಡ ವಿಧಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಈ ನಿಷೇಧವು ಕೇವಲ ಬ್ಲೂಟೂತ್, ಕ್ಯಾಮೆರಾ ಅಥವಾ ಇಂಟರ್ನೆಟ್ ಸಂಪರ್ಕ ಹೊಂದಿರುವ ‘ಸ್ಮಾರ್ಟ್’ ಸನ್‌ಗ್ಲಾಸ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಆಟಗಾರರು ಬಿಸಿಲಿನಿಂದ ರಕ್ಷಣೆಗಾಗಿ ಮೈದಾನದಲ್ಲಿ ಧರಿಸುವ ಸಾಮಾನ್ಯ ಕ್ರೀಡಾ ಸನ್‌ಗ್ಲಾಸ್‌ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.
ನಿಷೇಧಿತ ಸಾಧನಗಳು ಯಾವುವು?
ಮೊಬೈಲ್ ಫೋನ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳು, ಬ್ಲೂಟೂತ್ ಇಯರ್‌ಫೋನ್‌ಗಳು, ಇಯರ್‌ಪಾಡ್ಸ್ ಹಾಗೂ ಹೆಡ್‌ಫೋನ್‌ಗಳು, ಇಂಟರ್ನೆಟ್ ಅಥವಾ ಬ್ಲೂಟೂತ್ ಸಂಪರ್ಕ ಹೊಂದಿರುವ ಫಿಟ್‌ನೆಸ್ ಬ್ಯಾಂಡ್‌ಗಳು, ಡಿಜಿಟಲ್ ಕ್ಯಾಮೆರಾಗಳು, ವಿಡಿಯೋ ರೆಕಾರ್ಡರ್‌ಗಳು, ಪೋರ್ಟಬಲ್ ಸ್ಪೀಕರ್‌ಗಳು, ಟ್ರಾನ್ಸಿಸ್ಟರ್‌ಗಳು ಮತ್ತು ರೇಡಿಯೋ ಸಾಧನಗಳನ್ನು ಪಿಎಂಒಎ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಆದರೆ ತಂಡದ ಅಧಿಕೃತ ಡೇಟಾ ಅನಾಲಿಸ್ಟ್‌ಗೆ ಮಾತ್ರ ಪಂದ್ಯದ ವಿಶ್ಲೇಷಣೆಗಾಗಿ ಒಂದು ಲ್ಯಾಪ್‌ಟಾಪ್ ಬಳಸಲು ಅನುಮತಿ ನೀಡಲಾಗಿದೆ.
ಯಾರಿಗೆ ವಿನಾಯಿತಿ?
ತಂಡದ ಲಾಜಿಸ್ಟಿಕ್ಸ್ ಹಾಗೂ ತುರ್ತು ಆಡಳಿತಾತ್ಮಕ ಕಾರ್ಯಗಳಿಗಾಗಿ ತಂಡದ ಮ್ಯಾನೇಜರ್‌ಗೆ ಮೊಬೈಲ್ ಬಳಸಲು ಅವಕಾಶ ಇರುತ್ತದೆ. ಆದರೆ ಅವರು ಅದನ್ನು ಡ್ರೆಸ್ಸಿಂಗ್ ರೂಮ್ ಒಳಗೆ ಮಾತ್ರ ಬಳಸಬೇಕು; ಡಗೌಟ್‌ಗೆ ತೆಗೆದುಕೊಂಡು ಹೋಗುವಂತಿಲ್ಲ. ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್ ನಡುವೆ ತಾಂತ್ರಿಕ ಹಾಗೂ ಕ್ರೀಡಾ ವಿಷಯಗಳಿಗೆ ಸಂಬಂಧಿಸಿದ ತುರ್ತು ಸಂವಹನಕ್ಕಾಗಿ ಮಾತ್ರ ಸೀಮಿತವಾಗಿ ವಾಕಿ-ಟಾಕಿ ಬಳಕೆಗೆ ಬಿಸಿಸಿಐ ಅನುಮತಿ ನೀಡಿದೆ.