ವೈಭವ್ ಸೂರ್ಯವಂಶಿ ಭಾರತದ ಇತಿಹಾಸದಲ್ಲೇ ಅತಿ ಕಿರಿಯ ಚೊಚ್ಚಲ ಆಟಗಾರನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅಭಿಪ್ರಾಯಪಟ್ಟಿದ್ದಾರೆ. ಬ್ಯಾಟಿಂಗ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ಈ ಯುವ ಪ್ರತಿಭೆ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಲು ಸಜ್ಜಾಗಿದ್ದಾರೆ. ವರದಿಗಳ ಪ್ರಕಾರ, ಕೇವಲ 15 ವರ್ಷದ ಈ ಆಟಗಾರನಿಗೆ ಭಾರತ ಹಿರಿಯ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಐರ್ಲೆಂಡ್ ಪ್ರವಾಸಕ್ಕಾಗಿ ರೂಪುಗೊಳ್ಳುತ್ತಿರುವ ತಂಡದಲ್ಲಿ ಅವರ ಹೆಸರನ್ನು ಪರಿಗಣಿಸಲಾಗಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ತಂಡದ ಆಳವನ್ನು ಪರಿಶೀಲಿಸಲು ದ್ವಿತೀಯ ಹಂತದ ತಂಡವನ್ನು ಆಯ್ಕೆ ಮಾಡುವ ಯೋಚನೆಯಲ್ಲಿ ಇದೆ. ‘ಐರ್ಲೆಂಡ್ ಪ್ರವಾಸದಲ್ಲಿ ಅವರು ಪದಾರ್ಪಣೆ ಮಾಡುವ ಸಾಧ್ಯತೆ ಇದೆ, ಜೊತೆಗೆ ಹಲವಾರು ಆಟಗಾರರೊಂದಿಗೆ ಅವರ ಹೆಸರನ್ನೂ ಶಾರ್ಟ್‌ಲಿಸ್ಟ್ ಮಾಡಲಾಗಿದೆ’ ಎಂದು ಬಿಸಿಸಿಐ ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.
ಇದಲ್ಲದೆ, ಮುಂಬರುವ ಐರ್ಲೆಂಡ್ ಸರಣಿ ಮತ್ತು ವರ್ಷದ ಕೊನೆಯಲ್ಲಿ ನಡೆಯಲಿರುವ ಜಿಂಬಾಬ್ವೆ ಪ್ರವಾಸಕ್ಕೂ ವೈಭವ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ವಯೋಮಾನದ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿರುವ ವೈಭವ್, ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 26 ಎಸೆತಗಳಲ್ಲಿ 78, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 17 ಎಸೆತಗಳಲ್ಲಿ 52 ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ 39 ರನ್ ಸಿಡಿಸಿ ಗಮನ ಸೆಳೆದಿದ್ದಾರೆ.
ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವು ಮಾಜಿ ಕ್ರಿಕೆಟಿಗರು ಮತ್ತು ತಜ್ಞರನ್ನು ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಬೇಕು ಎಂಬ ಒತ್ತಾಯಕ್ಕೆ ಕಾರಣವಾಗಿದೆ.